ಮಧ್ಯಾಹ್ನದ ಅಲ್ಪನಿದ್ರೆಯಿಂದ ಆರೋಗ್ಯಕ್ಕಿದೆ ಲಾಭ; ವೈದ್ಯಕೀಯ ತಜ್ಞರು ಹೀಗಂತಾರೆ
ನ್ಯೂಸ್ ಆ್ಯರೋ: ನಮ್ಮಲ್ಲಿರುವ ಬಹುತೇಕರು ಮಧ್ಯಾಹ್ನದ ಊಟದ ನಂತರ ನಿದ್ರೆ ಮಾಡುತ್ತಾರೆ. ಮಧ್ಯಾಹ್ನ ನಿದ್ರೆ ಕಳೆದುಕೊಂಡರೆ ಕೆಲವರಿಗೆ ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ. ಮತ್ತೆ ಕೆಲವರು ಆಫೀಸ್ನಲ್ಲಿ ಇರುತ್ತಾರೆ. ಇನ್ನೂ ಕೆಲವರು ಮನೆಯಲ್ಲಿ ಬಿಡುವಿಲ್ಲದ ಕೆಲಸಗಳಿಂದ ಸ್ವಲ್ಪ ನಿದ್ದೆ ಮಾಡಲು ಕೂಡ ಅವರಲ್ಲಿ ಸಮಯ ಇರುವುದಿಲ್ಲ.
ಆದರೆ, ಕೆಲವು ಅಧ್ಯಯನಗಳು ವಯೋಮಿತಿಯನ್ನು ಲೆಕ್ಕಿಸದೆ ಎಲ್ಲರೂ ಮಧ್ಯಾಹ್ನ ಅಲ್ಪ ನಿದ್ರೆ ಮಾಡುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು ಎಂದು ತೋರಿಸಿವೆ. ಮಧ್ಯಾಹ್ನದ ನಿದ್ರೆಯಿಂದ ಹೃದಯದ ಆರೋಗ್ಯದ ಜೊತೆಗೆ ಸೋಮಾರಿತನ ಕಡಿಮೆಯಾಗುತ್ತದೆ. ಜೊತೆಗೆ ಮಾಡುವ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸಬಹುದು ಎಂದು ತಿಳಿಸುತ್ತಾರೆ ಸಂಶೋಧಕರು.
ಜರ್ನಲ್ ಆಫ್ ದಿ ಅಮೆರಿಕನ್ ಹಾರ್ಟ್ ಅಸೋಸಿಯೇಷನ್‌ನ ಅಧ್ಯಯನದಿಂದ ಮಧ್ಯಾಹ್ನದ ಊಟದ ನಂತರ ಅಲ್ಪನಿದ್ರೆ ಮಾಡುವುದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಬಹಿರಂಗಪಡಿಸಿದೆ.
ನ್ಯಾಷನಲ್ ಹಾರ್ಟ್, ಲಂಗ್ ಮತ್ತು ಬ್ಲಡ್ ಇನ್‌ಸ್ಟಿಟ್ಯೂಟ್ ನಡೆಸಿದ ಅಧ್ಯಯನವು ಮಧ್ಯಾಹ್ನದ ಊಟದ ಬಳಿಕ ಅಲ್ಪನಿದ್ರೆ ಮಾಡುವುದು, ಈಗಾಗಲೇ ಹೃದಯ ಸಂಬಂಧಿ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿರುವ ಅಧಿಕ ರಕ್ತದೊತ್ತಡ ಹೊಂದಿರುವ ಜನರಿಗೆ ಉತ್ತಮವಾಗಿದ್ದಾರೆ ಎಂದು ತಿಳಿದಿದೆ.
ದೇಹದಲ್ಲಿ ಹಾರ್ಮೋನ್ ಅಸಮತೋಲನದಿಂದ ಪಿಸಿಒಎಸ್, ಥೈರಾಯ್ಡ್, ಬೊಜ್ಜು, ಮಧುಮೇಹ ಮುಂತಾದ ದೀರ್ಘಕಾಲದ ಸಮಸ್ಯೆಗಳು ಉಂಟಾಗುತ್ತವೆ. ಆದರೆ, ಅಂತಹವರು ಮಧ್ಯಾಹ್ನದ ವೇಳೆ ನಿದ್ದೆ ಮಾಡಿದರೆ ಹಾರ್ಮೋನ್ಗಳು ಸಮತೋಲನದಲ್ಲಿರಲು ಸಾಧ್ಯವಿದೆ ಎನ್ನುತ್ತಾರೆ ಸಂಶೋಧಕರು.
ಮಧ್ಯಾಹ್ನದ ಊಟದ ನಂತರ 1ರಿಂದ 3 ಗಂಟೆಗಳ ಒಳಗೆ ನೀವು ಯಾವಾಗ ಬೇಕಾದರೂ ಮಲಗಬಹುದು ಎಂದು ತಜ್ಞರು ಹೇಳುತ್ತಾರೆ. ವಯಸ್ಕರು 10ರಿಂದ 30 ನಿಮಿಷ, ಮಕ್ಕಳು, ವೃದ್ಧರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರಿಗೆ 90 ನಿಮಿಷ ನಿದ್ರೆ ಮಾಡಿದರೆ ಸಾಕು ಎನ್ನುತ್ತಾರೆ ಸಂಶೋಧಕರು. ಮನೆಯಲ್ಲಿದ್ದವರು ಹಾಸಿಗೆಯಲ್ಲಿ ಚಿಕ್ಕ ನಿದ್ರೆ ಮಾಡಬಹುದು. ಎಡಕ್ಕೆ ತಿರುಗಿ ಮಲಗಲು ಸೂಚಿಸಲಾಗುತ್ತದೆ. ಕಚೇರಿಯ ನಿಯಮಗಳು ಅವಕಾಶ ನೀಡಿದರೆ ಊಟದ ವಿರಾಮದ ವೇಳೆ ಎದುರಿನ ಡೆಸ್ಕ್ ಮೇಲೆ ಮಲಗಬಹುದು ಎನ್ನುತ್ತಾರೆ ತಜ್ಞರು.
ಹಾಸಿಗೆ ಆರಾಮದಾಯಕವಾಗಿಲ್ಲದಿದ್ದರೆ, ಅವರು ಆರಾಮದಾಯಕವಾದ ಕುರ್ಚಿಯಲ್ಲಿ ಕುಳಿತು ಕೂಡ ನಿದ್ರಿಸಬಹುದು ಎಂದು ತಜ್ಞರು ಹೇಳುತ್ತಾರೆ. ಕೆಲವರು ವಿರಾಮವಿಲ್ಲದೆ ಇಡೀ ದಿನವನ್ನು ಕಳೆಯುತ್ತಾರೆ ಮತ್ತು ಸಂಜೆ ಸ್ವಲ್ಪ ನಿದ್ರೆ ಮಾಡುತ್ತಾರೆ. ಇದು ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. ಅದರಲ್ಲೂ ಸಂಜೆ 4ರಿಂದ 7 ಗಂಟೆಯ ನಡುವೆ ಸ್ವಲ್ಪವೂ ನಿದ್ರೆ ಮಾಡಬಾರದು.
ಆಹಾರ ಸರಿಯಾಗಿ ಜೀರ್ಣವಾಗದೆ ಹೊಟ್ಟೆ, ಮಲಬದ್ಧತೆ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗಳು ಸ್ವಾಭಾವಿಕವಾಗಿ ಅನೇಕರಲ್ಲಿ ಕಂಡುಬರುತ್ತವೆ. ಆದರೆ, ಮಧ್ಯಾಹ್ನ ಸ್ವಲ್ಪ ಹೊತ್ತು ನಿದ್ರೆ ಮಾಡುವುದರಿಂದ ಜೀರ್ಣಕ್ರಿಯೆ ಸುಧಾರಿಸಿ ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಅಲ್ಲದೆ, ವಿಶ್ರಾಂತಿಯಿಲ್ಲದೆ ಕೆಲಸ ಮಾಡುವುದು ಮತ್ತು ಮಧ್ಯಾಹ್ನ ನಿದ್ರೆ ಮಾಡದಿರುವುದು ಅರಿವಿಲ್ಲದೆ ಒತ್ತಡಕ್ಕೆ ಕಾರಣವಾಗುತ್ತದೆ. ಇದರ ಪರಿಣಾಮ ಸೌಂದರ್ಯದ ಮೇಲೂ ಪರಿಣಾಮ ಬೀರುತ್ತದೆ. ಮೊಡವೆ ಮತ್ತು ತಲೆಹೊಟ್ಟು ಉಂಟಾಗುತ್ತದೆ. ಹಾಗಾಗಿ ಊಟದ ನಂತರ ನಿದ್ದೆ ಮಾಡುವ ಮೂಲಕ ಒತ್ತಡವಿಲ್ಲದೆ ನಿಮ್ಮ ಸೌಂದರ್ಯ ಕಾಪಾಡಿಕೊಳ್ಳಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.
ಸ್ವಲ್ಪ ಹೊತ್ತು ಮಧ್ಯಾಹ್ನ ಅಲ್ಪ ನಿದ್ರೆ ಮಾಡುವುದರಿಂದ ಜ್ಞಾಪಕ ಶಕ್ತಿ ವೃದ್ಧಿಯಾಗುವುದಲ್ಲದೆ ಉತ್ಸಾಹ ಮತ್ತು ಕೆಲಸದ ಗುಣಮಟ್ಟವೂ ಹೆಚ್ಚುತ್ತದೆ. ಅಲ್ಲದೆ, ಹಲವಾರು ಅಧ್ಯಯನಗಳು ಊಟದ ನಂತರ ಚಿಕ್ಕನಿದ್ರೆ ತೆಗೆದುಕೊಳ್ಳುವುದು ಕೆಲಸದಲ್ಲಿ ಉತ್ಪಾದಕತೆ ಹೆಚ್ಚಿಸುತ್ತದೆ ಎಂದು ಸಂಶೋಧನೆಯಿಂದ ಕಂಡುಹಿಡಿಯಲಾಗಿದೆ.
Leave a Comment