ರಕ್ತ ಬರುವಂತೆ ಹಲ್ಲೆ, ಕೊಲೆಗೆ ಸಂಚು: ಸಚಿವೆ ವಿರುದ್ಧ ರವಿ ಪ್ರತಿ ದೂರು
ನ್ಯೂಸ್ ಆ್ಯರೋ: ಬೆಳಗಾವಿ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಿಟಿ ರವಿ ನಡುವಣ ಜಟಾಪಟಿ ವಿಕೋಪಕ್ಕೆ ತಿರುಗಿದೆ. ಸಚಿವೆ ಮಾಡಿರುವ ಗಂಭೀರ ಆರೋಪ ಒಂದೆಡೆಯಾದರೆ, ಇದೀಗ ತಮ್ಮ ಮೇಲೆ ರಕ್ತ ಬರುವಂತೆ ಹಲ್ಲೆ ಮಾಡಿದ್ದಾರೆ. ಕೊಲೆಗೆ ಸಂಚು ಹೂಡಲಾಗಿದೆ ಎಂದು ಸಿಟಿ ರವಿ ಆರೋಪಿಸಿದ್ದಾರೆ. ಜತೆಗೆ, ಪ್ರತಿ ದೂರು ಕೂಡ ನೀಡಿದ್ದಾರೆ.
ಇನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಸಿಟಿ ರವಿ ವಿರುದ್ಧ ಗುರುವಾರ ದೂರು ದಾಖಲಿಸಿದ್ದಾರೆ. ಸಿಟಿ ರವಿ ತಮ್ಮ ಕಡೆಗೆ ನುಗ್ಗಿ ಬಂದು 10 ಬಾರಿ ಆ ಆಕ್ಷೇಪಾರ್ಹ ಪದ ಬಳಸಿದ್ದಾರೆ. ಅಶ್ಲೀಲವಾಗಿ ಸನ್ನೆ ಕೂಡ ಮಾಡಿ, ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ದೂರು ಕೊಟ್ಟಿದ್ದರು. ಇದಾದ ಬೆನ್ನಲ್ಲೇ ಸುವರ್ಣಸೌಧದಲ್ಲಿ ಧರಣಿ ಕುಳಿತಿದ್ದ ಸಿಟಿ ರವಿಯನ್ನು ಹೀರೇಬಾಗೇವಾಡಿ ಪೊಲೀಸರು ಬಲವಂತವಾಗಿ ಹೆಗಲ ಮೇಲೆ ಹೊತ್ತುಕೊಂಡು, ಜೀಪು ಹತ್ತಿಸಿ ಕರೆದೊಯ್ದಿದ್ದರು. ಹೀರೇಬಾಗೇವಾಡಿ ಠಾಣೆಯಲ್ಲಿ ಕೆಲಹೊತ್ತು ಕೂರಿಸಿ ನಂತರ ನಂದಗಢ ಠಾಣೆಗೆ ಕರೆದೊಯ್ದಿದ್ದರು. ಮತ್ತೆ ಅಲ್ಲಿಂದ ಖಾನಾಪುರ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಬಂಧಿಸಿದ್ದರು.
ಇತ್ತ ಖಾನಾಪುರ ಠಾಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿಟಿ ರವಿ ಕೂಡ ಪ್ರತಿದೂರು ದಾಖಲಿಸಿದ್ದಾರೆ. ಖಾನಾಪುರ ಠಾಣೆಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ, ಕಾನೂನು ಸುವ್ಯವಸ್ಥೆ ಕಾರಣ ಪೊಲೀಸರು ಸಿಟಿ ರವಿಯನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಲು ಮುಂದಾದರು. ಈ ವೇಳೆಯೂ ಭಾರಿ ಹೈಡ್ರಾಮವೇ ನಡೆಯಿತು. ಬಿಜೆಪಿ ನಾಯಕರು ಏಕಾಏಕಿ ಮುಗಿಬಿದ್ದರು. ಇದರಿಂದ ಭಾರಿ ತಳ್ಳಾಟ, ನೂಕಾಟವೇ ನಡೆಯಿತು.
ಪೊಲೀಸರ ವರ್ತನೆ ವಿರುದ್ಧ ಆಕ್ರೋಶ ಹೊರಹಾಕಿದ ಸಿಟಿ ರವಿ ನನ್ನ ಕೊಲೆಗೆ ಸಂಚು ನಡೆಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪೊಲೀಸರು ಸಿಟಿ ರವಿಗೆ ರಕ್ತ ಬರುವಂತೆ ಹೊಡೆದಿದ್ದಾರೆ. ಈ ಕಾಂಗ್ರೆಸ್ನವರು ಏನು ಮಾಡುವುದಕ್ಕೂ ಹಿಂಜರಿಯುವುದಿಲ್ಲ. ಈ ಸರ್ಕಾರ ಬೆಳಗಾವಿಯನ್ನು ಮಿನಿ ಪಾಕಿಸ್ತಾನ ಮಾಡಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ಹೊರಹಾಕಿದರು.
ಡಿಸಿಎಂ ಮತ್ತು ಗೃಹ ಸಚಿವರ ಸೂಚನೆಯಂತೆ ಪೊಲೀಸ್ ಕಮಿಷನರ್ ವರ್ತಿಸುತ್ತಿದ್ದಾರೆ. ಸಿಟಿ ರವಿ ತಲೆಗೆ ರಕ್ತ ಬರುವಂತೆ ಏಟು ಬಿದ್ದಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆದ್ದಾರೆ.
Leave a Comment