ಪೋಲಿಸರ ವರ್ಗಾವಣೆ ನಿಯಮದಲ್ಲಿ ಬದಲಾವಣೆಗೆ ಚಿಂತನೆ – ಸರ್ಕಾರದ ವಿರುದ್ಧವೇ ಪೋಲಿಸರು ತಿರುಗಿಬೀಳೋ ಸಾಧ್ಯತೆ : ಕಾರಣವೇನು?
ನ್ಯೂಸ್ ಆ್ಯರೋ : ಪೊಲೀಸ್ ಕಾನ್ ಸ್ಟೇಬಲ್ ಗಳ ಅಂತರ ಜಿಲ್ಲಾ ವರ್ಗಾವಣೆ ನಿಯಮ ತಿದ್ದುಪಡಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಇದರಿಂದ ಪೋಲಿಸ್ ಕಾನ್ಸ್‌ಟೇಬಲ್ ಗಳು ರೊಚ್ಚಿಗೆದ್ದಿದ್ದು ಸರ್ಕಾರದ ಕ್ರಮವನ್ನು ಟೀಕಿಸಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ವರ್ಗಾವಣೆ ಬಯಸುವ ಪೊಲೀಸರಿಗೆ ಈಗಿರುವ 7 ವರ್ಷ ಸೇವಾವಧಿ ಪೂರ್ಣಗೊಳಿಸಬೇಕೆಂಬ ನಿಯಮವನ್ನು 10 ವರ್ಷಕ್ಕೆ ಹೆಚ್ಚಳ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ ಎನ್ನಲಾಗಿದ್ದು, ಕಳೆದ ನಾಲ್ಕು ವರ್ಷದಿಂದ ವರ್ಗಾವಣೆಗಾಗಿ ಕಾಯುತ್ತಿರುವ ಪೊಲೀಸ್ ಕಾನ್ ಸ್ಟೇಬಲ್ ಗಳು ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಅಂತರ ಜಿಲ್ಲಾ ವರ್ಗಾವಣೆ ಅವಧಿಯನ್ನು 10 ವರ್ಷಕ್ಕೆ ಹೆಚ್ಚಳ ಮಾಡಿದ್ದಲ್ಲಿ ಕುಟುಂಬ ಸಹಿತ ಹೋರಾಟ ನಡೆಸಲು ಮುಂದಾಗಿದ್ದಾರೆ. ಬಹಳಷ್ಟು ವಿವಾಹಿತ ಪೋಲಿಸ್ ಕಾನ್ಸ್‌ಟೇಬಲ್ ಗಳು ಮಕ್ಕಳ ವಿದ್ಯಾಭ್ಯಾಸದ ಉದ್ದೇಶದಿಂದ, ಪೋಷಕರ ಪಾಲನೆಗಾಗಿ ಹೆಂಡತಿ ಮಕ್ಕಳನ್ನು ಪೋಷಕರ ಜೊತೆಯಲ್ಲೇ ಬಿಟ್ಟು ಸಂಸಾರದಿಂದ ದೂರವಿದ್ದು ಏಕಾಂಗಿಯಾಗಿ ಜೀವನ ನಡೆಸುತ್ತಿರುತ್ತಾರೆ. ಅಂಥವರಿಗೆ ಈ ಹೊಸ ನಿಯಮ ಕಂಟಕವಾಗಲಿದೆ.
ಮೊದಲೆಲ್ಲ ಎರಡೂವರೆ ವರ್ಷ ಪ್ರೊಬೇಷನರಿ ಅವಧಿ ಪೂರ್ಣಗೊಳಿಸಿದ ಕಾನ್ ಸ್ಟೆಬಲ್ ಗಳನ್ನು ವರ್ಗಾವಣೆ ಮಾಡಲಾಗುತ್ತಿತ್ತು. ನಂತರ ಮೂರು ವರ್ಷ ಅವಧಿಗೆ ವಿಸ್ತರಿಸಲಾಗಿದ್ದು, 2019 ರಲ್ಲಿ 5 ವರ್ಷ ಸೇವಾ ಅವಧಿ ಪೂರ್ಣಗೊಳಿಸಿದ ಸಿಬ್ಬಂದಿಯನ್ನು ಮಾತ್ರ ಅಂತರ ಜಿಲ್ಲಾ ವರ್ಗಾವಣೆಗೆ ಪರಿಗಣಿಸಲಾಗುವುದಾಗಿ ಆದೇಶ ಹೊರಡಿಸಲಾಗಿತ್ತು. ನಂತರ 7 ವರ್ಷ ಅವಧಿಗೆ ಹೆಚ್ಚಳ ಮಾಡಲಾಗಿದೆ.
ಆದರೆ ಇದೀಗ ಈ ಅವಧಿಯನ್ನು 10 ವರ್ಷಕ್ಕೆ ಹೆಚ್ಚಿಸಲು ಸರ್ಕಾರ ಮುಂದಾಗಿದೆ ಎನ್ನಲಾಗಿದ್ದು, ವರ್ಗಾವಣೆ ಅವಕಾಶ ಸಿಗದ ಕಾರಣ ಪೊಲೀಸರು ಅಸಮಾಧಾನಗೊಂಡಿದ್ದಾರೆ. ಒಂದು ವೇಳೆ ಈ ನಿಯಮ ಜಾರಿಯಾದರೆ ಪೋಲಿಸರು ಸರ್ಕಾರದ ವಿರುದ್ಧವೇ ತಿರುಗಿಬೀಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
Leave a Comment