25ನೇ ವರ್ಷದ ದತ್ತಜಯಂತಿ; ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸ್ ‌ಹೈಅಲರ್ಟ್, ಮದ್ಯ ಬಂದ್‌

datta jayanthi
Spread the love

ನ್ಯೂಸ್ ಆ್ಯರೋ: ಕರ್ನಾಟಕದ ಅತಿದೊಡ್ಡ ವಿವಾದಿತ ಪ್ರದೇಶ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸಂಪೂರ್ಣ ಹಿಂದೂ ಪೀಠಕ್ಕಾಗಿ ಆಗ್ರಹಿಸಿ ನಡೆಯುತ್ತಿರುವ 25 ನೇ ವರ್ಷದ ದತ್ತಜಯಂತಿ ಶಾಂತಿಯುತವಾಗಿ ನಡೆಸಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಿದ್ದವಾಗಿದ್ದು, ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಿದೆ. ಕಾಫಿನಾಡಿನಲ್ಲಿ ಖಾಕಿ ಕಟ್ಟೆಚ್ಚರ ವಹಿಸಿದೆ.

ಇನ್ನು ಜಿಲ್ಲೆಯ ವಿವಾದಿತ ಸ್ಥಳ ಚಂದ್ರದ್ರೋಣ ಪರ್ವತದ ಸಾಲಿನ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸಂಪೂರ್ಣ ಹಿಂದೂ ಪೀಠಕ್ಕಾಗಿ ಆಗ್ರಹಿಸಿ ವಿಹೆಚ್​ಪಿ, ಭಜರಂಗದಳ ನೇತೃತ್ವದಲ್ಲಿ ನಡೆಯುತ್ತಿರುವ 25ನೇ ವರ್ಷದ ದತ್ತಜಯಂತಿಗೆ ಚಿಕ್ಕಮಗಳೂರು ಜಿಲ್ಲಾಡಳಿತ ಸಕಲ‌ ಸಿದ್ದತೆ ನಡೆಸಿದೆ. ಡಿಸೆಂಬರ್ 6 ರಂದು ದತ್ತಮಾಲಾ ಧಾರಣೆ ಮೂಲಕ ಆರಂಭವಾಗಿರುವ ದತ್ತಜಯಂತಿ 14ರವರೆಗೂ ನಡೆಯಲಿದೆ. ಪ್ರಮುಖ ಕಾರ್ಯಕ್ರಮಗಳು 12 ರಿಂದ 14 ರ ವರೆಗೂ ನಡೆಯಲಿದ್ದು, ಪೊಲೀಸ್ ಇಲಾಖೆ, ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಿದೆ.

25ನೇ ವರ್ಷದ ದತ್ತಜಯಂತಿ ಹಿನ್ನೆಲೆ ವಿಹೆಚ್​ಪಿ, ಭಜರಂಗದಳ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಧರ್ಮ ಸಭೆ, ಶೋಭಾಯಾತ್ರೆ ನಡೆಯಲಿದೆ. ಶಾಂತಿಯುತ ದತ್ತಜಯಂತಿಗಾಗಿ ಚಿಕ್ಕಮಗಳೂರು ಪೊಲೀಸ್ ಇಲಾಖೆ, ಜಿಲ್ಲಾಡಳಿತ ಅಲರ್ಟ್ ಆಗಿದ್ದು ಇಂದಿನಿಂದ ಚಿಕ್ಕಮಗಳೂರು ಪೋಲಿಸ್ ಕಾವಲಿನಲ್ಲಿ ಇರಲಿದೆ. 7 ಎಸ್ಪಿಗಳ ನೇತೃತ್ವದಲ್ಲಿ 4000 ಪೊಲೀಸರ ನಿಯೋಜನೆ ಮಾಡಲಾಗಿದೆ. 27 ಮಂದಿ ಡಿವೈಎಸ್ಪಿ, 45 ಮಂದಿ ಇನ್ಸ್‌ಸ್ಪೆಕ್ಟರ್‌, 300 ಪೊಲೀಸ್‌ ಸಬ್‌ ಇನ್ಸ್‌ಸ್ಪೆಕ್ಟರ್‌, 500 ಮಂದಿ ಗೃಹ ರಕ್ಷಕದಳ ಸಿಬ್ಬಂದಿ, 20 ಕೆಎಸ್‌ಆರ್‌ಪಿ, 28 ಡಿಎಆರ್‌ ನಿಯೋಜನೆ ಮಾಡಲಾಗಿದೆ.

ಇದರ ಜತೆಗೆ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶದಲ್ಲಿರುವ ಸ್ಥಳೀಯರಲ್ಲಿ ಆತ್ಮಸ್ಥೈರ್ಯ ತುಂಬಲು ರೂಟ್‌ ಮಾರ್ಚ್‌ ನಡೆಸಲು ಆರ್‌ಐಎಫ್‌ ತುಕಡಿಯನ್ನು ನಿಯೋಜಿಸಲಾಗಿದೆ. ಇನ್ನೂ 61 ವಿಶೇಷ ಅಧಿಕಾರಿಗಳ ನೇಮಕ ಮಾಡಿದ್ದು, ಜಿಲ್ಲೆಯ ಗಡಿ ಭಾಗ ಸೇರಿದಂತೆ ಚಿಕ್ಕಮಗಳೂರು ನಗರದಲ್ಲಿ 36 ಚೆಕ್ ಪೋಸ್ಟ್, 400 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಚಿಕ್ಕಮಗಳೂರು ಮೂಡಿಗೆರೆ, ಶೃಂಗೇರಿ ಕೊಪ್ಪ, ಎಚ್​ಆರ್​ ಪುರ, ಕಡೂರು, ತರೀಕೆರೆ ತಾಲೂಕಿನಲ್ಲಿ 13 ರಿಂದ 14ರ ವರೆಗೂ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಡಿ.11 ರಿಂದ 15 ರ ಬೆಳಗ್ಗೆ 10 ಗಂಟೆಯ ವರೆಗೂ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಸೇರಿದಂತೆ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ, ಮಾಣಿಕ್ಯಾಧಾರ ಸೇರಿದಂತೆ ಚಂದ್ರದ್ರೋಣ ಪರ್ವತದ ಸಾಲಿನ ಪ್ರವಾಸಿತಾಣಗಳಿಗೆ ನಿರ್ಬಂಧ ಹೇರಲಾಗಿದೆ.

Leave a Comment

Leave a Reply

Your email address will not be published. Required fields are marked *

error: Content is protected !!