ಮನೆಯೊಳಗೆ ಚಪ್ಪಲಿ ಧರಿಸಬಹುದೇ?; ಈ ಕುರಿತು ವಾಸ್ತು ಹೇಳುವುದೇನು?

Vastu
Spread the love

ನ್ಯೂಸ್ ಆ್ಯರೋ: ಸಿಟಿಗಳಲ್ಲಿ ಇತ್ತೀಚೆಗೆ ಮನೆಯ ಒಳಗೆ, ವಾಶ ರೂಮಿಗೆ ಹೋಗುವಾಗ ಚಪ್ಪಲಿ ಬಳಸುವುದು ಸಾಮಾನ್ಯವಾಗಿದೆ. ಆದರೆ ಹಳ್ಳಿಗಳಲ್ಲಿ ಈ ರೂಢಿ ಇನ್ನೂ ಬಂದಿಲ್ಲ. ವಾಸ್ತು ಪ್ರಕಾರ ಮನೆಯೊಳಗೆ ಚಪ್ಪಲಿ ಧರಿರಬಹುದೋ ಬಾರದೋ? ಕೆಲವರು ಮನೆಯ ಒಳಗೆ ಚಪ್ಪಲಿ ಅಥವಾ ಶೂ ಧರಿಸಬಹುದು ಎನ್ನುತ್ತಾರೆ. ಇನ್ನು ಕೆಲವರು ಮನೆಯ ಒಳಗೆ ಚಪ್ಪಲಿ ಅಥವಾ ಶೂ ಧರಿಸುವುದು ದಾರಿದ್ರ್ಯ ಎನ್ನುತ್ತಾರೆ.

ವಾಸ್ತು ತಜ್ಞರು ಹೇಳುವಂತೆ ಶನಿದೇವನಿಗೂ ನಮ್ಮ ಪಾದಗಳಿಗೂ ಸಂಬಂಧವಿದೆ. ಪಾದಕ್ಕೆ ಧರಿಸುವ ಶೂಗಳು ಮತ್ತು ಚಪ್ಪಲಿಗಳು ರಾಹು ಕೇತುಗಳ ಸಂಕೇತವಾಗಿದೆ. ಮನೆಯ ಮುಖ್ಯ ಬಾಗಿಲಲ್ಲಿ ಶೂ ಮತ್ತು ಚಪ್ಪಲಿ ಇಡಬಾರದು. ಏಕೆಂದರೆ ನಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶಿಸುತ್ತದೆ. ಪಾದರಕ್ಷೆ ಮತ್ತು ಚಪ್ಪಲಿ ಧರಿಸಿ ಮನೆಯೊಳಗೆ ಬರುವ ವ್ಯಕ್ತಿಯೊಂದಿಗೆ ರಾಹು ಮತ್ತು ಕೇತುಗಳಂತಹ ದುಷ್ಟ ಗ್ರಹಗಳು ಸಹ ಮನೆಯೊಳಗೆ ಪ್ರವೇಶಿಸುತ್ತವೆ. ಅದಕ್ಕಾಗಿಯೇ ಮನೆಯಲ್ಲಿ ಚಪ್ಪಲಿ ಧರಿಸುವುದು ನಿಷಿದ್ಧವಾಗಿದೆ. ಪರ್ಯಾಯವಾಗಿ, ನೀವು ಮನೆಯಲ್ಲಿ ಸಾಕ್ಸ್ ಧರಿಸಬಹುದು. ಮನೆಯಲ್ಲಿ ಅಡುಗೆ ಕೋಣೆ, ದಾಸ್ತಾನು ಕೊಠಡಿ, ಪೂಜಾ ಕೊಠಡಿ, ಸುರಕ್ಷಿತ ಸ್ಥಳ ಮುಂತಾದವುಗಳ ಮುಂದೆ ಪಾದರಕ್ಷೆ ಅಥವಾ ಚಪ್ಪಲಿಗಳನ್ನು ಧರಿಸುವುದರಿಂದ ಧನ – ಧಾನ್ಯಕ್ಕೆ ಸಂಬಂಧಿಸಿದ ಕೊರತೆಗಳನ್ನು ಅನುಭವಿಸಬೇಕಾಗುತ್ತದೆ.

ನಿಮ್ಮ ಬೂಟುಗಳು ಮತ್ತು ಚಪ್ಪಲಿಗಳನ್ನು ನೀವು ತೆಗೆದಾಗ, ಅವುಗಳನ್ನು ಎಂದಿಗೂ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇಡಬಾರದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ನೀವು ಕೊಳೆಯಿರುವ ಪಾದರಕ್ಷೆಗಳೊಂದಿಗೆ ಮನೆಗೆ ಬಂದು ಅದನ್ನು ಉತ್ತರ ದಿಕ್ಕಿನಲ್ಲಿ ತೆಗೆದಿಡುವುದರಿಂದ, ನಿಮ್ಮ ಮನೆಯ ಧನಾತ್ಮಕ ಶಕ್ತಿಯು ನಕಾರಾತ್ಮಕ ಶಕ್ತಿಯಾಗಿ ಬದಲಾಗುತ್ತದೆ. ಐಶ್ವರ್ಯದ ಅಧಿದೇವತೆಯಾದ ಲಕ್ಷ್ಮಿಯೂ ಅಂತಹ ಮನೆಯನ್ನು ಪ್ರವೇಶಿಸದೆ, ಆ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಯಾಗುವಂತೆ ಮಾಡುತ್ತಾಳೆ.

ಈ ಕಾರಣದಿಂದಾಗಿ ನೀವು ಎಂದಿಗೂ ನಿಮ್ಮ ಕೊಳಕು ಬೂಟುಗಳು ಮತ್ತು ಚಪ್ಪಲಿಗಳನ್ನು ಉತ್ತರ ದಿಕ್ಕಿನಲ್ಲಿ ತೆಗೆದಿಡಬಾರದು. ಬದಲಾಗಿ ಶೂಗಳು ಮತ್ತು ಚಪ್ಪಲಿಗಳನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇರಿಸಬಹುದು. ಹರಿದ ಮತ್ತು ಹಳೆಯ ಪಾದರಕ್ಷೆಗಳನ್ನು ಧರಿಸುವುದರಿಂದ ಶನಿಯ ಅಶುಭ ನೆರಳು ನಿಮ್ಮ ಮೇಲೆ ಬೀಳುತ್ತದೆ ಮತ್ತು ಮನೆಯಲ್ಲಿ ಬಡತನ ಎದುರಾಗುತ್ತದೆ. ಶನಿವಾರದಂದು ಬೂಟುಗಳು ಮತ್ತು ಚಪ್ಪಲಿಗಳನ್ನು ಖರೀದಿಸುವುದನ್ನು ನಿಷೇಧಿಸಲಾಗಿದೆ. ಏಕೆಂದರೆ ಶನಿಯು ಓರ್ವ ವ್ಯಕ್ತಿಯ ಪಾದಗಳೊಂದಿಗೆ ಸಂಬಂಧವನ್ನು ಹೊಂದಿದ್ದಾನೆ ಎಂದು ಪರಿಗಣಿಸಲಾಗುತ್ತದೆ. ಈ ದಿನ ಶೂ ಮತ್ತು ಚಪ್ಪಲಿಗಳನ್ನು ಖರೀದಿಸುವುದರಿಂದ ಮನೆಯಲ್ಲಿ ಶನಿ ಸಂಬಂಧಿತ ಸಮಸ್ಯೆಗಳು ಎದುರಾಗಬಹುದು.

ಆದರೆ ಮನೆಯೊಳಗೆ ಪ್ರತ್ಯೇಕವಾದ, ಹೊರಗೆ ಬಳಸದ ಸ್ವಚ್ಛ ಚಪ್ಪಲಿಗಳನ್ನು ಬಳಸಬಹುದು. ಆದರೆ ಇವುಗಳನ್ನು ಅಡುಗೆ ಕೋಣೆಗೂ ದೇವರ ಕೋಣೆಗೂ ಒಯ್ಯಬಾರದು. ಇನ್ನು ಹಿಂದೂಗಳಲ್ಲದೆ ಅನ್ಯ ಧರ್ಮಗಳಲ್ಲಿ ಮನೆಯೊಳಗೆ ಶುಭ್ರ ಚಪ್ಪಲಿ ಧರಿಸುವುದು ಸಾಮಾನ್ಯವಾಗಿದೆ. ಈ ಲೇಖನದ ವಿಚಾರ ಕೇವಲ ಮಾಹಿತಿಗಾಗಿ ಮಾತ್ರ ಆಗಿದ್ದು, ಯಾವುದೇ ಮತ- ಧರ್ಮಗಳ ನಿಯಮಗಳಿಗೆ ಅಥವಾ ರೂಢಿಗಳಿಗೆ ಧಕ್ಕೆ ತರುವ ಉದ್ದೇಶವನ್ನು ಹೊಂದಿಲ್ಲ.

Leave a Comment

Leave a Reply

Your email address will not be published. Required fields are marked *

error: Content is protected !!