ಮತ್ತೊಮ್ಮೆ ಹಿಂದೂ ದೇವರುಗಳ ಅವಹೇಳನ; ಬಿಟಿ ಲಲಿತಾ ನಾಯಕ್ ವಿವಾದಾತ್ಮಕ ಹೇಳಿಕೆ
ನ್ಯೂಸ್ ಆ್ಯರೋ: ಮಾಜಿ ಸಚಿವೆ, ನಟಿ, ಲೇಖಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಬಿಟಿ ಲಲಿತಾ ನಾಯಕ್ ಮತ್ತೊಮ್ಮೆ ಹಿಂದೂ ದೇವರುಗಳ ಅವಹೇಳನ ಮಾಡಿದ್ದಾರೆ. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಮಾರಂಭದಲ್ಲಿ ಹೋರಾಟಗಾರ್ತಿ ಬಿ.ಟಿ.ಲಲಿತಾ ನಾಯಕ್ ಹಿಂದು ದೇವರುಗಳನ್ನು ಲೇವಡಿ ಮಾಡಿದ್ದಾರೆ.
ಹಿಂದುಗಳ ಪ್ರಮುಖ ಆರಾಧ್ಯದೈವವಾದ ಗಣೇಶ, ಶಿವ, ಪಾರ್ವತಿ ಹಾಗೂ ಅಯ್ಯಪ್ಪನ ಬಗ್ಗೆ ಅವರು ಟೀಕೆ ಮಾಡಿದ್ದಾರೆ. ಧರೆಗೆ ದೊಡ್ಡವರು ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಲಲಿತಾ ನಾಯಕ್,’ಗಣೇಶ ಅನ್ನೋದು ಒಂದು ಜ್ಞಾನ. ಆ ಜ್ಞಾನಕ್ಕೆ ಒಂದು ಆಕಾರ ಕೊಟ್ಟಿದ್ದಾರೆ. ಅದಕ್ಕೆ ಒಂದು ಸೊಂಡಿಲು, ತಲೆ ಇದೆ. ಈಶ್ವರ ಅನ್ನುವಂತಹ ಅಪ್ಪ ಇದಾನೆ. ದೇವರು ಇದ್ದವನು ಯಾರನ್ನಾದರೂ ಕೊಲ್ಲುತ್ತಾನಾ? ಧರೆಯಿಂದ ಆಕಾಶದೆತ್ತರಕ್ಕೆ ಬೆಳೆದವನು ದೇವರು. ಅಣುರೇಣು ತೃಣಕಾಷ್ಟದಲ್ಲಿಯೂ ದೇವರಿದ್ದಾನೆ ಎನ್ನುತ್ತೀರಿ. ಹಾಗಿದ್ದರೆ, ಪಾರ್ವತಿ ದೇವಿಯ ಬಚ್ಚಲು ಮನೆಯಲ್ಲಿ ದೇವರು ಇದ್ದಿರಲಿಲ್ವಾ? ಎಂದು ಕುಹಕ ಮಾಡಿದ್ದಾರೆ.
ಹುಡುಗ ಅಡ್ಡ ನಿಂತಿದ್ದಾನೆ ಎಂದು ಕೊಂದು ಹೋಗುವವನ್ನು ದೇವರು ಅನ್ನೋದು ಹೇಗೆ? ಅವರೆಲ್ಲ ದೇವರಲ್ಲ, ಮನುಷ್ಯರು. ಆ ಮನುಷ್ಯ ಮಾಡಿರೋ ತಪ್ಪು ನಾವು ಮಾಡಬಾರದು. ಅಯ್ಯಪ್ಪ ಭಕ್ತರು ಅಂತಾ ಕೆಲವರು ಬಹಳ ಮಾಡುತ್ತಿರುತ್ತಾರೆ. ಆದರೆ, ಅಯ್ಯಪ್ಪ ಕಾಡಿನಲ್ಲಿ ಇಲ್ಲ. ಅಯ್ಯಪ್ಪ ಎಲ್ಲ ಕಡೆ ಅನಾಥವಾಗಿ ಇದ್ದಾನೆ. ಅನೇಕ ಅನಾಥ ಮಕ್ಕಳಿದ್ದಾರೆ. ಅವರಿಗೆ ತಂದೆ-ತಾಯಿ ಇಲ್ಲ.
ಅವರನ್ನು ನೋಡಿಕೊಳ್ಳುವ ಕೆಲಸ ಆಗಬೇಕು. ಅದನ್ನು ಬಿಟ್ಟು ಕಾಡಿಗೆ ಹೋಗುವುದಲ್ಲ. ಅಲ್ಲಿ ಕಾಡು ಕಡಿದು ಪುರೋಹಿತಶಾಹಿಗೆ ಅವಕಾಶ ಕೊಟ್ಟಿದ್ದಾರೆ. ಅಲ್ಲೆಲ್ಲ ತಲೆಯ ಮೇಲೆ ಏನೇನೋ ಹೊತ್ತುಕೊಂಡು ಹೋಗ್ತಾರೆ. ಜಯಮಾಲಾ ಏನೋ ಮುಟ್ಟಿದ್ರಂತೆ. ಮಟ್ಟಿದ ಕೂಡಲೇ ಮೈಲಿಗೆ ಆಯ್ತು ಅಂದ್ರು. ಕುಳಿತಿರೋ ಮೂರ್ತಿಗೆ ಯಾರು ಮುಟ್ಟಿದ್ರು ಒಂದೇ, ಮುಟ್ಟದಿದ್ದರೂ ಒಂದೇ ಎಂದು ಹೇಳಿದ್ದಾರೆ.
ಸೀತೆಯನ್ನು ಬೆಂಕಿಗೆ ದೂಡಿದ್ರು. ಬದುಕಿದ್ಳು, ದೈವಿ ಸ್ವರೂಪ ಅಂತಾರೆ. ಅದು ಹಾಗಲ್ಲ. ಸೀತೆ ಬೆಂಕಿಯಲ್ಲಿ ಸುಟ್ಟು ಹೋಗಿದ್ಳು. ಮಣ್ಣು ಮಾಡಿದ್ದರು. ಅದನ್ನೇ ಭೂತಾಯಿ ಕೈ ಹಿಡಿದು ಎತ್ತಿದ್ರು ಅಂತಾರೆ. ಅದೆಲ್ಲ ಏನೂ ಅಲ್ಲ. ಅವರೆಲ್ಲ ಮನುಷ್ಯರೇ ಎಂದು ಬಿಟಿ ಲಲಿತಾ ನಾಯಕ್ ಮಾತನಾಡಿದ್ದಾರೆ.
Leave a Comment