ತುಳು ಸಿನಿಮಾದಲ್ಲಿ ರೂಪೇಶ್ ಶೆಟ್ಟಿ ಜೊತೆ ಬಾಲಿವುಡ್ ನಟ; ʼಜೈʼ ಚಿತ್ರದ ಶೂಟಿಂಗ್ ಆರಂಭಿಸಿದ ಸುನೀಲ್ ಶೆಟ್ಟಿ
ನ್ಯೂಸ್ ಆ್ಯರೋ: ಕರಾವಳಿ ಪ್ರತಿಭೆ ಹಾಗೂ ಬಿಗ್ಬಾಸ್ ವಿನ್ನರ್ ಕರಾವಳಿ ಮೂಲದ ರೂಪೇಶ್ ಶೆಟ್ಟಿ ʻಜೈ ́ ಎನ್ನುವ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ರೂಪೇಶ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ‘ಜೈ’ ಶೀರ್ಷಿಕೆಯ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ನಟ ಸುನೀಲ್ ಶಟ್ಟಿ ಕೂಡಾ ನಟಿಸುತ್ತಿದ್ದಾರೆ. ಈ ಮೊದಲು ಸುನಿಲ್ ಶೆಟ್ಟಿ ಅವರು ಅವರು ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಪಾಡಿದರು. ಈ ಜೈ ಸಿನಿಮಾದಲ್ಲಿ ರೂಪೇಶ್ ಶೆಟ್ಟಿ ಜೊತೆ ಸುನಿಲ್ ಶೆಟ್ಟಿ ಕೈ ಜೋಡಿಸಿರುವುದು ಎಲ್ಲರ ಗಮನ ಸೆಳೆದಿದೆ.
ಜೈ’ ಸಿನಿಮಾ ತುಳುವಿನಲ್ಲಿ ಬಿಗ್ ಬಜೆಟ್ ನ ಸಿನಿಮಾ ಆಗಿದೆ. ಸಿನಿಮಾಕ್ಕೆ ಕರಾವಳಿಯನ್ನು ಕೇಂದ್ರೀಕರಿಸಿ ವಿವಿಧ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದೆ. ಮುಖ್ಯವಾಗಿ ಕುತ್ತಾರ್, ದಂಬೇಲ್, ಮರಕಡ, ಶೂಲಿನ್ ಪ್ಯಾಲೇಸ್ ಮರವೂರು, ಬೊಂದೇಲ್ ಪಣಂಬೂರು, ಬೈಕಂಪಾಡಿಯಲ್ಲಿ ಚಿತ್ರೀಕರಣ ನಡೆದಿದೆ. ಜಿಲ್ಲೆಯ ಖ್ಯಾತನಾಮ ಕಲಾವಿದರು ಸಿನಿಮಾದಲ್ಲಿದ್ದಾರೆ.
ಗಿರಿಗಿಟ್, ಗಮ್ಜಾಲ್, ಸರ್ಕಸ್ ಚಿತ್ರಗಳ ಯಶಸ್ಸಿನ ಬಳಿಕ ರೂಪೇಶ್ ಶೆಟ್ಟಿ ಅವರು ಮತ್ತೊಂದು ಬಿಗ್ ಬಜೆಟ್ ನ ಸಿನಿಮಾಕ್ಕೆ ಕೈ ಹಾಕಿದ್ದಾರೆ. ಜೈ ಸಿನಿಮಾ ಆರ್ ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗುತ್ತಿದೆ. ಈ ಸಿನಿಮಾದಲ್ಲಿ ಸುನಿಲ್ ಶೆಟ್ಟಿ ನಟಿಸಿರುವುದೇ ವಿಶೇಷ.
ಸುನೀಲ್ ಶೆಟ್ಟಿ ಮೂಲತಃ ಮಂಗಳೂರು ಮೂಲದವರು. ಅವರಿಗೆ ತುಳು ಭಾಷೆ ಸ್ಪಷ್ಟವಾಗಿ ಮಾತನಾಡಲು ಬರುತ್ತದೆ. ಅವರು ಬಾಲಿವುಡ್ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಈಗ ಅವರು ತುಳು ಸಿನಿಮಾ ಮಾಡುತ್ತಿದ್ದಾರೆ. ರೂಪೇಶ್ ಶೆಟ್ಟಿ ಜೊತೆ ಇದಕ್ಕಾಗಿ ಕೈ ಜೋಡಿಸಿದ್ದಾರೆ. ಅವರಿಗೆ ತುಳು ಸಿನಿಮಾ ಮಾಡಬೇಕು ಎಂಬ ಆಸೆ ಮೊದಲಿನಿಂದಲೂ ಇತ್ತಂತೆ. ಈಗ ಅವರು ತಮ್ಮ ಆಸೆಯನ್ನು ಈಡೇರಿಸಿಕೊಂಡಿದ್ದಾರೆ.
ರೂಪೇಶ್ ಶೆಟ್ಟಿ ಅವರು ಇತ್ತೀಚೆಗೆ ‘ಜೈ’ ಹೆಸರಿನ ಸಿನಿಮಾ ಘೋಷಣೆ ಮಾಡಿದ್ದಾರೆ. ಇದನ್ನು ರೂಪೇಶ್ ಶೆಟ್ಟಿ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಇದರಲ್ಲಿ ಅವರೇ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಇದು ಪಕ್ಕಾ ತುಳು ಸಿನಿಮಾ. ಇದಕ್ಕೆ ಬಾಲಿವುಡ್ ಹೀರೋನ ಆಗಮನ ಆಗಿದೆ ಎಂಬುದು ವಿಶೇಷ. ರೂಪೇಶ್ ಶೆಟ್ಟಿ ಅವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದ್ದಾರೆ.
ರೂಪೇಶ್ ಶೆಟ್ಟಿ ಸಿನಿಮಾದ ನಿರ್ದೇಶಕರಾಗಿದ್ದು, ಕತೆ ಹಾಗೂ ಸಂಭಾಷಣೆಯನ್ನು ಪ್ರಸನ್ನ ಶೆಟ್ಟಿ ಬೈಲೂರು ಬರೆದಿದ್ದಾರೆ. ಕ್ಯಾಮರಾ ವಿನುತ್ ಕೆ, ಸಂಗೀತ ಲೊಯ್ ವೆಲೆಂಟಿನ್ ಸಲ್ದಾನ, ಸಂಕಲನ ರಾಹುಲ್ ವಸಿಷ್ಠ, ನಿರ್ಮಾಪಕರು ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ, ಸಹ ನಿರ್ಮಾಪಕರು ದೀಕ್ಷಿತ್ ಆಳ್ವ, ನೃತ್ಯ ಹಾಗೂ ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ನವೀನ್ ಶೆಟ್ಟಿ ಆರ್ಯನ್ಸ್. ನಾಯಕಿಯಾಗಿ ಅದ್ವಿತಿ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಸಿನಿಮಾಕ್ಕೆ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆ. ಮೂರನೇ ಹಂತದ ಚಿತ್ರೀಕರಣ ಜನವರಿಯಲ್ಲಿ ನಡೆಯಲಿದೆ ಎಂದು ನಟ, ನಿರ್ದೇಶಕ ರೂಪೇಶ್ ಶೆಟ್ಟಿ ಹೇಳಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ತುಳು ಭಾಷೆಯಲ್ಲೇ ಮಾತನಾಡಿದ ನಟ ಸುನೀಲ್ ಶೆಟ್ಟಿ, ”ನನ್ನ ಮೊದಲ ತುಳು ಚಿತ್ರ. ಬಹಳ ಖುಷಿ ಆಗುತ್ತಿದೆ. ತುಳು ಸಿನಿಮಾ ಮಾಡಬೇಕು ಎಂದುಕೊಂಡಿದ್ದೆ. ತುಳು ಸಿನಿಮಾಗಳಲ್ಲಿ ಬಹಳ ಬೆಳವಣಿಗೆ ಆಗಿದೆ. ಜೈ ಸಿನಿಮಾ ಬಗ್ಗೆ ರೂಪೇಶ್ ತಿಳಿಸಿದರು. ಸಬ್ಜೆಕ್ಟ್ ಕೇಳಿದಾಗ ಈ ಸಿನಿಮಾ ಮಾಡಲೇಬೇಕು ಎಂದನಿಸಿತು.
ನಾವು ತುಳುನಾಡಿನವರು. ಎಂದೆಂದಿಗೂ ಅಮ್ಮನ ಆಶೀರ್ವಾದ ಇದೆ. ವರ್ಷ ವರ್ಷವೂ ಬಪ್ಪನಾಡಿಗೆ ಬರುತ್ತೇನೆ. ಧರ್ಮಸ್ಥಳ, ಸುಬ್ರಹ್ಮಣ್ಯ ಸೇರಿ ಎಲ್ಲಾ ಕಡೆಗೂ ಭೇಟಿ ಕೊಡುತ್ತಿರುತ್ತೇನೆ. ಇವತ್ತು ಇಲ್ಲಿ ಬಂದು ಸಿನಿಮಾ ಮಾಡುತ್ತಿರುವುದು ಬಹಳ ಖುಷಿಯ ವಿಷಯ. ಹಾಗೇ ಹೆಮ್ಮೆಯ ಕ್ಷಣ. ತುಳುನಾಡು ಬಹಳ ಚಿಕ್ಕ ಜಾಗ. ಅದಾಗ್ಯೂ, ಬೆಳವಣಿಗೆಗಳು ನಡೆಯುತ್ತಿವೆ. ಒಳ್ಳೊಳ್ಳೆ ಸಬ್ಜೆಕ್ಟ್ನ ಸಿನಿಮಾ ಬರುತ್ತಿವೆ. ನಾನು ಈ ಸಿನಿಮಾದ ಭಾಗವಾಗಿದ್ದು, ರೂಪೇಶ್ಗೆ ಧನ್ಯವಾದಗಳು ಎಂದು ತಿಳಿಸಿದರು.
Leave a Comment