ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ; ಮೃತರ ಸಂಖ್ಯೆ 5ಕ್ಕೆ ಏರಿಕೆ
ನ್ಯೂಸ್ ಆ್ಯರೋ: ವರುಣನ ಆರ್ಭಟಕ್ಕೆ ರಾಜ್ಯ ರಾಜಧಾನಿ ಬೆಂಗಳೂರು ಅಕ್ಷರಶಃ ತತ್ತರಿಸಿ ಹೋಗಿದೆ. ನಗರದ ಅನೇಕ ಪ್ರದೇಶಗಳು ಜಲಾವೃತಗೊಂಡಿದ್ದು, ಜನ-ಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಿಂದಾಗಿ ನಿನ್ನೆ (ಅ.22) ನಗರದ ಬಾಬುಸಾಬ್ಪಾಳ್ಯದಲ್ಲಿ ದುರಂತವೊಂದು ಘಟಿಸಿತು.
ನಿರ್ಮಾಣ ಹಂತದ 6 ಅಂತಸ್ತಿನ ಕಟ್ಟಡ ಕುಸಿದಿದ್ದು, ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿದೆ. ನಿನ್ನೆ ಸಂಜೆ ಈ ಘಟನೆ ನಡೆಯಿತು. ಈ ವೇಳೆ ಓರ್ವ ಕಾರ್ಮಿಕನ ಸಾವು ಖಚಿತವಾಗಿತ್ತು. ಸ್ಥಳದಲ್ಲಿ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಇದೀಗ ಇನ್ನೂ ನಾಲ್ವರ ಮೃತದೇಹ ಕಟ್ಟಡದ ಅವಶೇಷಗಳ ಅಡಿಯಲ್ಲಿ ಪತ್ತೆಯಾಗಿದೆ. ಮೃತರು ಬಿಹಾರ ಮೂಲದವರೆಂದು ತಿಳಿದುಬಂದಿದೆ.
ಇನ್ನು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಇಬ್ಬರು ಕಾರ್ಮಿಕರನ್ನು ರಕ್ಷಣೆ ಮಾಡಿ, ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಳೆದ 15 ಗಂಟೆಯಿಂದ ಕಾರ್ಮಿಕರು ಜೀವವನ್ನು ಬಿಗಿಯಾಗಿ ಹಿಡಿದು ಬದುಕಿಬಂದಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು ಆರು ಅಂತಸ್ತಿನ ಕಟ್ಟಡ ಇದಾಗಿದ್ದು, ಬಹುತೇಕ ಕೆಲಸ ಪೂರ್ಣಗೊಂಡಿತ್ತು. ದುರ್ಘಟನೆ ಸಂಭವಿಸಿದಾಗ 20 ಕಾರ್ಮಿಕರು ಕಟ್ಟಡದಲ್ಲಿದ್ದರು ಎಂದು ವರದಿಯಾಗಿದೆ. ಮಳೆಯ ನಡುವೆಯೂ ಕಟ್ಟಡದ ಪೇಂಟಿಂಗ್ ಕೆಲಸಗಳು ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.
Leave a Comment