ಗೋವಾದಲ್ಲಿ ಬಾಲಕಿಯ ಕೊಲೆ; 18 ವರ್ಷಗಳ ಬಳಿಕ ಮಡಿಕೇರಿಯಲ್ಲಿ ಅಂತ್ಯಕ್ರಿಯೆ
ನ್ಯೂಸ್ ಆ್ಯರೋ: 18 ವರ್ಷಗಳ ಹಿಂದೆ ಗೋವಾದಲ್ಲಿ ಕೊಲೆಯಾಗಿದ್ದ, ಮಡಿಕೇರಿಯ ಅಯ್ಯಂಗೇರಿಯ 13 ವರ್ಷದ ಬಾಲಕಿ ಸಫಿಯಾ ಅಂತ್ಯಸಂಸ್ಕಾರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆಯಿತು. 2006ರಲ್ಲಿ ಕಾಸರಗೋಡಿನ ಕೆ.ಸಿ.ಹಂಝ ಎಂಬಾತ ಮನೆ ಕೆಲಸಕ್ಕೆಂದು ಬಾಲಕಿಯನ್ನು ಗೋವಾಕ್ಕೆ ಕರೆದೊಯ್ದಿದ್ದ.
ನಂತರ, ಬಿಸಿ ಗಂಜಿ ಮೈಮೇಲೆ ಬಿದ್ದು ಬಾಲಕಿ ತೀವ್ರವಾಗಿ ಗಾಯಗೊಂಡಿದ್ದಳು. ಬಾಲಕಾರ್ಮಿಕ ಪ್ರಕರಣ ದಾಖಲಾಗುವ ಹೆದರಿಕೆಯಿಂದ ಹಂಝ ಆಕೆಯನ್ನು ಕೊಲೆ ಮಾಡಿ, ಮೃತದೇಹವನ್ನು ಮೂರು ತುಂಡುಗಳನ್ನಾಗಿ ಕತ್ತರಿಸಿ ಗೋವಾದಲ್ಲೇ ಹೂತಿದ್ದ. ಬಳಿಕ ಬಾಲಕಿ ಕಾಣೆಯಾಗಿದ್ದಾಳೆ ಎಂದು ಪೋಷಕರಿಗೆ ತಿಳಿಸಿದ್ದ.
ಪೊಲೀಸರಿಗೆ ದೂರು ನೀಡಿದ್ದ ಪೋಷಕರು ‘ಸಫಿಯಾ ಕ್ರಿಯಾ ಸಮಿತಿ’ ಎಂಬ ಸಮಾನ ಮನಸ್ಕರ ಗುಂಪೊಂದನ್ನು ರಚಿಸಿಕೊಂಡು ಕಾಸರಗೋಡಿನಲ್ಲಿ ಸತತ 90 ದಿನ ಪ್ರತಿಭಟಿಸಿದ್ದರು. ನಂತರ, ಕೇರಳ ಸರ್ಕಾರವು ಪ್ರಕರಣದ ತನಿಖೆಯನ್ನು ಅಪರಾಧ ವಿಭಾಗಕ್ಕೆ ವರ್ಗಾಯಿಸಿತ್ತು. ತನಿಖೆ ನಡೆಸಿದಾಗ, 2008ರಲ್ಲಿ ಬಾಲಕಿಯ ಅಸ್ಥಿಪಂಜರ ಗೋವಾದಲ್ಲಿ ಪತ್ತೆಯಾಗಿತ್ತು. ಹಂಝನನ್ನು ಬಂಧಿಸಲಾಗಿತ್ತು. ಕಾಸರಗೋಡು ಸೆಷೆನ್ಸ್ ನ್ಯಾಯಾಲಯ ಆತನಿಗೆ ಮರಣದಂಡನೆ ವಿಧಿಸಿತ್ತು. 2019ರಲ್ಲಿ ಕೇರಳ ಹೈಕೋರ್ಟ್ ಶಿಕ್ಷೆಯನ್ನು ಜೀವಾವಧಿಗೆ ಇಳಿಸಿತ್ತು. ಆದರೆ, ಸಫಿಯಾಳ ಅಸ್ತಿಪಂಜರ ಕಾಸರಗೋಡು ನ್ಯಾಯಾಲಯದ ಸುಪರ್ದಿಯಲ್ಲೇ ಉಳಿದಿತ್ತು.
ದೇಹದ ಅವಶೇಷಗಳನ್ನು ಹಸ್ತಾಂತರಿಸುವಂತೆ ಪೋಷಕರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ನವೆಂಬರ್ 6ರಂದು ಕಾಸರಗೋಡಿನ ಜಿಲ್ಲಾ ಪ್ರಧಾನ ನ್ಯಾಯಾಲಯ ತಲೆಬುರುಡೆ ಹಾಗೂ ಮೂಳೆಗಳನ್ನು ಹೆತ್ತವರ ವಶಕ್ಕೆ ನೀಡುವಂತೆ ಆದೇಶಿಸಿತ್ತು. ಸೋಮವಾರ ಅಸ್ಥಿಪಂಜರವನ್ನು ಕೊಚ್ಚಿನ್‌ನ ವಿಧಿವಿಜ್ಞಾನ ಪ್ರಯೋಗಾಲಯದಿಂದ ತಂದ ಪೋಷಕರು ಅಯ್ಯಂಗೇರಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಿದರು ಎಂದು ಸ್ಥಳೀಯರು ತಿಳಿಸಿದ್ದಾರೆ.
Leave a Comment