ಬಿಜೆಪಿ ಸಂಸದರಿಗೆ ಗಾಯ, ರಾಹುಲ್ ಗಾಂಧಿಯೇ ತಳ್ಳಿದ್ದು ಎಂದ ಸಾರಂಗಿ; ಚಿಕಿತ್ಸೆ ನೀಡಿದ ಡಾ. ಸಿ.ಎನ್ ಮಂಜುನಾಥ್!
ನ್ಯೂಸ್ ಆ್ಯರೋ: ಬಿಜೆಪಿ ಸಂಸದ ಪ್ರತಾಪ್ ಸಾರಂಗಿಗೆ ಗಾಯಗಳಾಗಿದ್ದು, ರಾಹುಲ್ ಗಾಂಧಿಯೇ ನನ್ನನ್ನು ತಳ್ಳಿದ್ದು ಎಂದು ಆರೋಪಿಸಿದ್ದಾರೆ. ಬಿ.ಆರ್.ಅಂಬೇಡ್ಕರ್ ವಿಚಾರ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಸಂಸತ್ತಿನ ಆವರಣದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಗಾಯಗೊಂಡಿದ್ದಾರೆ.
ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ತಳ್ಳಿದರು ಎಂದು ಸಾರಂಗಿ ಆರೋಪಿಸಿದ್ದಾರೆ. ಮತ್ತೊಂದೆಡೆ, ಬಿಜೆಪಿ ಸಂಸದರು ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಸಂಸತ್ತಿನ ಮಕರ ದ್ವಾರದಲ್ಲಿ ತಳ್ಳಿದರು ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ನಾನು ನಿಂತಿದ್ದೆ ರಾಹುಲ್ ಗಾಂಧಿ ಬೇರೊಬ್ಬ ಸಂಸದರನ್ನು ತಳ್ಳಿದ್ದರು, ಆ ಸಂಸದ ನನ್ನ ಮೇಲೆ ಬಿದ್ದು ನಾನು ಕೆಳಗೆ ಬಿದ್ದೆ ಎಂದು ಪ್ರತಾಪ್ ಹೇಳಿದ್ದಾರೆ.
ಇನ್ನು ಬಿಜೆಪಿ ಸಂಸದರಿಬ್ಬರು ಗಾಯಗೊಂಡಾಗ ಅವರಿಗೆ ಕರ್ನಾಟಕದ ಸಂಸದ ಡಾ.ಮಂಜುನಾಥ್ ಚಿಕಿತ್ಸೆ ನೀಡಿದರು. ತಲೆಗೆ ಗಂಭೀರವಾಗಿ ಗಾಯವಾಗಿ ರಕ್ತ ಸುರಿಯಲು ಆರಂಭಿಸಿದ್ದರಿಂದ ಕರ್ನಾಟಕದ ಸಂಸದ ಹಾಗೂ ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ. ಸಿಎನ್ ಮಂಜುನಾಥ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದರು.
ಇನ್ನು ಬಿಜೆಪಿ ನಾಯಕರ ಆರೋಪಗಳನ್ನು ನಿರಾಕರಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಸಂಸದರೇ ರಾಹುಲ್ ಗಾಂಧಿ ಅವರು ಸಂಸತ್ ಪ್ರವೇಶಿಸದಂತೆ ತಡೆದರು ಎಂದು ಆರೋಪಿಸಿದ್ದಾರೆ.
Leave a Comment