ಗಾಯಕ ಬಾದ್ಶಾಗೆ ಸೇರಿದ ಬಾರ್ ಮೇಲೆ ಬಾಂಬ್ ದಾಳಿ; ಲಾರೆನ್ಸ್ ಬಿಷ್ಣೋಯಿ ಸಹಚರರಿಂದ ಕೃತ್ಯ
ನ್ಯೂಸ್ ಆ್ಯರೋ: ಸಲ್ಮಾನ್ ಖಾನ್ ಆಪ್ತ ಬಾಬಾ ಸಿದ್ಧಿಖಿಯನ್ನು ಹತ್ಯೆ ಮಾಡಿರುವ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿ ಸಹಚರರು ಇದೀಗ ಖ್ಯಾತ ಪಂಜಾಬಿ ಗಾಯಕ ಬಾದ್ಶಾಗೆ ಸೇರಿದ ಬಾರ್ ಮತ್ತು ರೆಸ್ಟೊರೆಂಟ್ ಮೇಲೆ ಬಾಂಬ್ ದಾಳಿ ನಡೆಸಿದ್ದಾರೆ. ಚಂಡೀಘಡದಲ್ಲಿರುವ ಬಾದ್ಶಾ ಮಾಲೀಕತ್ವದ ಬಾರ್ ಮತ್ತು ರೆಸ್ಟೊರೆಂಟ್ ಮುಂಭಾಗದಲ್ಲಿ ಬಾಂಬ್ ಎಸೆಯಲಾಗಿದೆ. ಆದರೆ ಈ ದಾಳಿಯಲ್ಲಿಯೂ ಯಾರಿಗೂ ಹಾನಿ ಆಗಿಲ್ಲ. ಬಾರ್ಗೂ ಹಾನಿ ಆಗಿಲ್ಲ ಎಂದು ತಿಳಿದು ಬಂದಿದೆ.
ಬಾದ್ಶಾರ ನೈಟ್ಕ್ಲಬ್, ಚಂಢೀಘಡದ ಸೆಕ್ಟರ್ 26 ರಲ್ಲಿದ್ದು, ಇಲ್ಲಿದೆ ಐಟಿ ಮಂದಿ ಸೇರಿದಂತೆ ಶ್ರೀಮಂತ ಯುವಕ-ಯುವತಿಯರು ಪಾರ್ಟಿ ಮಾಡಲು ಆಗಮಿಸುತ್ತಾರೆ. ನವೆಂಬರ್ 27ರ ಮುಂಜಾನೆ 2:45 ರ ವೇಳೆಗೆ ಬೈಕ್ನಲ್ಲಿ ಬಂದ ಇಬ್ಬರು ಬಾಂಬ್ ಅನ್ನು ನೈಟ್ಕ್ಲಬ್ ಮುಂದೆ ಎಸೆದು ಪರಾರಿಯಾಗಿದ್ದಾರೆ. ಲಘು ಬಾಂಬ್ಗಳನ್ನು ಎಸೆಯಲಾಗಿದ್ದು, ಇದರಿಂದ ಯಾವುದೇ ಹಾನಿ ಆಗಿಲ್ಲ.
ಈ ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯಿಯ ಸಹಚರರೇ ಆಗಿರುವ ಗೋಲ್ಡಿ ಬ್ರಾರ್, ರೋಹಿತ್ ಗದಾರ ಅವರುಗಳು ಹೊತ್ತುಕೊಂಡಿದ್ದಾರೆ. ಈ ಬಗ್ಗೆ ಅವರು ಫೇಸ್ಬುಕ್ ಪೋಸ್ಟ್ ಸಹ ಹಂಚಿಕೊಂಡಿದ್ದಾರೆ.
ಬಾದ್ಶಾಗೆ ಸೇರಿದ ಡಿಯೋರಾ ರೆಸ್ಟಾರೆಂಟ್ ಮತ್ತು ಸಿವಿಲ್ಲೀ ಬಾರ್ ಮತ್ತು ಲಾಂಜ್ ಅನ್ನು ಗುರಿಯಾಗಿಸಿಕೊಂಡು ಈ ದಾಳಿ ಮಾಡಲಾಗಿದ್ದು, ಈ ಹಿಂದೆ ಬಾದ್ಶಾ ಬಳಿ ಹಫ್ತಾ ಹಣ ಕೇಳಿದ್ದೆವು ಆದರೆ ಆತ ಕೊಡದೇ ನಿರ್ಲಕ್ಷ್ಯ ಮಾಡಿದ್ದ ಇದೇ ಕಾರಣಕ್ಕೆ ಈ ದಾಳಿ ಮಾಡಲಾಗಿದೆ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
Leave a Comment