ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್: 14 ಮಾವೋವಾದಿಗಳ ಹತ್ಯೆ
ನ್ಯೂಸ್ ಆ್ಯರೋ: ಇಲ್ಲಿನ “ನಾರಾಯಣಪುರ ಮತ್ತು ದಾಂತೇವಾಡ ಗಡಿ ಪ್ರದೇಶದಲ್ಲಿ ಇಂದು ಭದ್ರತಾ ಪಡೆಗಳು 14 ಮಂದಿ ನಕ್ಸಲರನ್ನು ಹತ್ಯೆಗೈದಿವೆ” ಎಂದು ಬಸ್ತಾರ್ ಐಜಿ ತಿಳಿಸಿದ್ದಾರೆ.
ಭದ್ರತಾ ಪಡೆಗಳು ಅಬುಜ್ಮದ್ ಅರಣ್ಯದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ನಕ್ಸಲರು ಅಡಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಭದ್ರತಾ ಪಡೆಗಳು ಮುಂದೆ ಸಾಗುತ್ತಿದ್ದಂತೆ ನಕ್ಸಲರು ಗುಂಡಿನ ದಾಳಿ ಆರಂಭಿಸಿದ್ದಾರೆ. ನಂತರ ಭದ್ರತಾ ಸಿಬ್ಬಂದಿ ಪ್ರತ್ಯುತ್ತರವಾಗಿ ದಾಳಿ ನಡೆಸಿದ್ದಾರೆ. ನಾರಾಯಣಪುರ ಮತ್ತು ದಾಂತೇವಾಡ ಪೊಲೀಸರ ಜಂಟಿ ತಂಡ ಎನ್‌ಕೌಂಟರ್ ನಡೆದ ಸ್ಥಳದಲ್ಲೇ ಬೀಡುಬಿಟ್ಟಿವೆ. ಉನ್ನತ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಪರಾಮರ್ಶಿಸುತ್ತಿದ್ದಾರೆ.
“ದಾಂತೇವಾಡ, ನಾರಾಯಣಪುರ ಗಡಿಯಲ್ಲಿ ಎನ್‌ಕೌಂಟರ್ ನಡೆದಿದೆ. 14 ನಕ್ಸಲೀಯರು ಹತರಾಗಿದ್ದಾರೆ. ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ದಾಂತೇವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ರೈ ಮಾಹಿತಿ ನೀಡಿದ್ದಾರೆ.
ಎಕೆ-47, ಎಸ್‌ಎಲ್‌ಆರ್ ಸೇರಿದಂತೆ ಇತರೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಈ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರೆದಿದೆ. ಈ ವರ್ಷ ಬಸ್ತಾರ್ ಪ್ರದೇಶದ ಏಳು ಜಿಲ್ಲೆಗಳಲ್ಲಿ ನಡೆದ ಎನ್‌ಕೌಂಟರ್‌ಗಳಲ್ಲಿ ಭದ್ರತಾ ಪಡೆ ಇದುವರೆಗೂ 164 ನಕ್ಸಲರನ್ನು ಹೊಡೆದುರುಳಿಸಿದೆ.
Leave a Comment