ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ; ಕರ್ನಾಟಕ ಸೇರಿ 3 ರಾಜ್ಯಗಳಿಗೆ ಸುಪ್ರೀಂ ನೋಟಿಸ್
ನ್ಯೂಸ್ ಆ್ಯರೋ: ಉತ್ತರ ಪ್ರದೇಶ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳಿಗೆ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ. ಅತುಲ್ ಸುಭಾಷ್ ಅವರ ತಾಯಿ ಅಂಜು ಮೋದಿಯವರು ನಾಲ್ಕು ವರ್ಷದ ಮ್ಮೊಮ್ಮಗನನ್ನು ನನ್ನ ಸುಪರ್ಧಿಗೆ ನೀಡಿ ಎಂದು ಸುಪ್ರೀಂ ಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿ.ವಿ.ನಾಗರತ್ನ ಮತ್ತು ನ್ಯಾ.ಎನ್.ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ಪೀಠವು ಪರಿಸ್ಥಿತಿಯ ಬಗ್ಗೆ ಸ್ಪಷ್ಟನೆ ನೀಡುವಂತೆ ಉತ್ತರ ಪ್ರದೇಶ, ಹರಿಯಾಣ, ಕರ್ನಾಟಕ ಸರ್ಕಾರಗಳಿಗೆ ನೋಟಿಸ್ ನೀಡಿದೆ. ಮುಂದಿನ ವಿಚಾರಣೆ ಜನವರಿ 7ಕ್ಕೆ ನಿಗದಿಪಡಿಸಿದೆ.
ಅತುಲ್ ಸುಭಾಷ್ ಅವರ ಪತ್ನಿ ನಿಖಿತಾ ಸಿಂಘಾನಿಯಾ ಮತ್ತು ಅವರ ತಾಯಿ ಮತ್ತು ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ನಿಖಿತಾ ಸಿಂಘಾನಿಯಾ ಅವರು ಮಗು ಎಲ್ಲಿದೆ ಎಂಬುವುದನ್ನು ಬಹಿರಂಗಪಡಿಸಿಲ್ಲ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.
ಮಗುವನ್ನು ಫರಿದಾಬಾದ್ ಬೋರ್ಡಿಂಗ್ ಶಾಲೆಗೆ ದಾಖಲಿಸಲಾಗಿದೆ ಮತ್ತು ನನ್ನ ಚಿಕ್ಕಪ್ಪ ಸುಶೀಲ್ ಸಿಂಘಾನಿಯಾ ಅವರ ಬಳಿ ಇದೆ ಎಂದು ನಿಖಿತಾ ಪೊಲೀಸರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ಆದರೆ ಮಗು ಇರುವ ಸ್ಥಳದ ಬಗ್ಗೆ ಮಾಹಿತಿ ಇಲ್ಲ ಎಂದು ಸುಶೀಲ್ ಹೇಳಿದ್ದಾರೆ.
ಹೀಗಾಗಿ, ಅಂಜು ಮೋದಿಯವರು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಘಟನೆಯ ಬಗ್ಗೆ ಸ್ಪಷ್ಟನೆ ನೀಡುವಂತೆ ಉತ್ತರ ಪ್ರದೇಶ, ಹರಿಯಾಣ, ಕರ್ನಾಟಕ ಸರ್ಕಾರಗಳಿಗೆ ನೋಟಿಸ್ ನೀಡಿದೆ.
ಡಿಸೆಂಬರ್ 9 ರಂದು ಬೆಂಗಳೂರಿನಲ್ಲಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೂ ಮುನ್ನ 24 ಪುಟಗಳ ಪತ್ರ ಹಾಗೂ ಒಂದು ಗಂಟೆ ಅವಧಿಯ ವಿಡಿಯೋ ರೆಕಾರ್ಡ್ ಮಾಡಿದ್ದರು. ವಿಡಿಯೋದಲ್ಲಿ ತಾವು ಎದುರಿಸಿದ್ದ ಕಷ್ಟಗಳನ್ನು ಬಹಿರಂಗಪಡಿಸಿದ್ದರು.
ಪತ್ನಿ ತನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಆರೋಪಿಸಿದ್ದರು. ಈ ಪ್ರಕರಣದಲ್ಲಿ ಅತುಲ್ ಪತ್ನಿ ನಿಖಿತಾ ಸಿಂಘಾನಿಯಾ ಮತ್ತು ತಾಯಿ ನಿಶಾ ಸಿಂಘಾನಿ ಮತ್ತು ಸಹೋದರ ಅನುರಾಗ್ ಸಿಂಘಾನಿಯಾ ಅವರನ್ನು ಡಿಸೆಂಬರ್ 16 ರಂದು ಬಂಧಿಸಲಾಗಿದೆ. ಮೂವರ ವಿರುದ್ಧ ಆತ್ಮಹತ್ಯೆ ಪ್ರಚೋದನೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
Leave a Comment