Mangalore : ಜೂನ್ 28ರ ಉಳ್ಳಾಲ ಟಿಪ್ಪರ್ ಹಾಗೂ ಸ್ಕೂಟರ್ ನಡುವೆ ಅಪಘಾತ ಪ್ರಕರಣ – ಆಸ್ಪತ್ರೆ ಸೇರಿದ್ದ ಗಾಯಾಳು ಮೃತ್ಯು, ಫಲಿಸಲಿಲ್ಲ ಗೆಳೆಯರ ಸಹಾಯ, ಹಾರೈಕೆ

20240702 103051
Spread the love

ನ್ಯೂಸ್ ಆ್ಯರೋ : ಕಳೆದ ಜೂನ್ 28ರಂದು ಟಿಪ್ಪರ್‌ ಹಾಗೂ ಸ್ಕೂಟರ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪಾವೂರು ಮಲಾರು ಅಕ್ಷರನಗರ ನಿವಾಸಿ ವಿಶ್ವನಾಥ್‌ ಆಚಾರ್ಯ ಎಂಬವರ ಪುತ್ರ ಗಣೇಶ್‌ ಆಚಾರ್ಯ ( 27) ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಮಂಗಳೂರಿನ ಫಸ್ಟ್‌ ನ್ಯೂರೋ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯಲು ಸಹಕರಿಸಿದ ಹಿತೈಷಿಗಳ, ಸಂಬಂಧಿಕರ, ಸ್ನೇಹಿತರ ಪ್ರಾರ್ಥನೆ ಕೊನೆಗೂ ಈಡೇರಲಿಲ್ಲ.

ಜೂ.28 ರಂದು ಪಾವೂರು ಹರೇಕಳ ಕಡೆಯಿಂದ ಕೊಣಾಜೆ ಕಡೆಗೆ ತೆರಳುವ ಸಂದರ್ಭ ಬೆಳಿಗ್ಗೆ 11.50ರ ಸುಮಾರಿಗೆ ಹರೇಕಳ ಗ್ರಾಮ ಪಂಚಾಯತ್‌ ಕಚೇರಿಯ ಎದುರುಗಡೆ ಅಪಘಾತ ಸಂಭವಿಸಿತ್ತು.

ಟಿಪ್ಪರ್‌ ವಾಹನ ಚಾಲಕನ ದುಡುಕುತನ ಹಾಗೂ ನಿರ್ಲಕ್ಷ್ಯತನದ ಚಾಲನೆ ನಡೆಸಿ ಹಠಾತ್‌ ಬ್ರೇಕ್‌ ಹಾಕಿದ ಪರಿಣಾಮ ಹಿಂಬದಿಯಲ್ಲಿದ್ದ ಸ್ಕೂಟರ್‌ ಢಿಕ್ಕಿ ಹೊಡೆದು ಸ್ಕೂಟರ್‌ ಸಮೇತ ಸವಾರ ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು.

ಗಾಯಾಳುವನ್ನು ತಕ್ಷಣ ಟಿಪ್ಪರ್‌ ಚಾಲಕ ಸೇರಿದಂತೆ ಸ್ಥಳೀಯರು ನಾಟೆಕಲ್‌ ಕಣಚೂರು ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಅಡ್ಯಾರ್‌ ಫಸ್ಟ್‌ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಂಗಳೂರಿನಲ್ಲಿ ಎ.ಸಿ ಮೆಕ್ಯಾನಿಕ್‌ ಆಗಿದ್ದ ಗಣೇಶ್‌, ಮನೆಯ ಹಿರಿಯ ಪುತ್ರನಾಗಿದ್ದು, ಮನೆಗೆ ಜೀವನಾಧಾರವಾಗಿದ್ದರು. ಮೃತರು ತಾಯಿ, ತಂದೆ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.

ಟಿಪ್ಪರ್‌ ಲಾರಿ ಚಾಲಕ ಮಹಮ್ಮದ್‌ ಹನೀಫ್‌ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಮೃತ ಗಣೇಶ್‌ ಆಚಾರ್ಯ ಶಸ್ತ್ರಚಿಕಿತ್ಸೆಗೆ ರೂ.10 ಲಕ್ಷ ಖರ್ಚಾಗುವ ಸಾಧ್ಯತೆ ಇದ್ದುದರಿಂದ ಸ್ನೇಹಿತರು ವಾಟ್ಸ್ಯಾಪ್‌ ಮೂಲಕ ದಾನಿಗಳ ಸಹಕಾರವನ್ನು ಕೋರಿದ್ದು, ಹಲವರು ಸಹಾಯಹಸ್ತಕ್ಕೆ ಕೈಜೋಡಿಸಿದ್ದರು.

Leave a Comment

Leave a Reply

Your email address will not be published. Required fields are marked *

error: Content is protected !!