ಜಮ್ಮು ಕಾಶ್ಮೀರದಲ್ಲಿ ಖಾತೆ ತೆರೆದ ಎಎಪಿ: ಬಿಜೆಪಿ ಕ್ಷೇತ್ರ ಆಪ್ ವಶಕ್ಕೆ
ನ್ಯೂಸ್ ಆ್ಯರೋ: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಆಮ್ ಆದ್ಮಿ ಪಕ್ಷ (ಎಎಪಿ) ಜಮ್ಮು ಮತ್ತು ಕಾಶ್ಮೀರದಲ್ಲಿ ಗೆಲುವಿನ ರುಚಿ ಕಂಡಿದೆ. ಬಿಜೆಪಿ ಪ್ರಾಬಲ್ಯದ ಕ್ಷೇತ್ರದಲ್ಲಿ ಜಯಭೇರಿ ಬಾರಿಸುವ ಮೂಲಕ ಕಣಿವೆ ನಾಡಿನಲ್ಲಿ ಇದೇ ಮೊದಲ ಬಾರಿಗೆ ಖಾತೆ ತೆರೆಯಿತು.
ಜಮ್ಮು ಪ್ರಾಂತ್ಯದ ದೋಡಾದಲ್ಲಿ ಎಎಪಿ ಅಭ್ಯರ್ಥಿ ಮೆಹ್ರಾಜ್ ಮಲ್ಲಿಕ್ ಅವರು ಬಿಜೆಪಿಯ ಗಜಯ್ ಸಿಂಗ್ ರಾಣಾ ವಿರುದ್ಧ 4,470 ಮತಗಳಿಂದ ಗೆಲುವು ಪಡೆದಿದ್ದಾರೆ. ಮಲ್ಲಿಕ್ 22,944 ಮತಗಳನ್ನು ಪಡೆದರೆ, ರಾಣಾ 18,174 ಮತ ಗಳಿಸಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ನ ನಜೂಬ್ ಸುಗ್ರವಾರ್ಡ್ಯ್ 12,975 ಮತಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶೇಖ್ ರಿಯಾಜ್ ಅಹ್ಮದ್ ಅವರಿಗೆ 4,087 ಮತಗಳು ಬಿದ್ದಿವೆ.
ಮುಸ್ಲಿಂ ಪ್ರಾಬಲ್ಯವಿರುವ ಈ ಕ್ಷೇತ್ರವನ್ನು 2014ರಲ್ಲಿ ಬಿಜೆಪಿ ಗೆದ್ದಿತ್ತು. ಇದೀಗ ಎಎಪಿ ತನ್ನ ತೆಕ್ಕೆಗೆ ಪಡೆದಿದೆ. 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಾನಿ ಅವರನ್ನು ಸೋಲಿಸಿ ಬಿಜೆಪಿಯ ಶಕ್ತಿ ರಾಹ್ ಪರಿಹರ್ ಗೆಲುವು ಕಂಡಿದ್ದರು. 2013ರಲ್ಲಿ ಎಎಪಿ ಸೇರಿದ್ದ ಮಲ್ಲಿಕ್, ಕಹರ ಕ್ಷೇತ್ರದಿಂದ ಜಿಲ್ಲಾ ಅಭಿವೃದ್ದಿ ಮಂಡಳಿ (ಡಿಡಿಸಿ) ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದರು.
ಮಲ್ಲಿಕ್ ಗೆಲುವನ್ನು ಪಕ್ಷದ ಮುಖ್ಯಸ್ಥರಾಗಿರುವ ಅರವಿಂದ್ ಕೇಜ್ರಿವಾಲ್ ಸ್ವಾಗತಿಸಿ, ಶುಭ ಕೋರಿದ್ದಾರೆ. ಈ ಕುರಿತು ‘ಎಕ್ಸ್’ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಕೇಜ್ರಿವಾಲ್, ‘ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಅಭೂತಪೂರ್ವ ಗೆಲುವು ಕಂಡಿರುವ ಎಎಪಿಯ ದೋಡಾ ಅಭ್ಯರ್ಥಿ ಮೆಹ್ರಾಜ್ ಮಲ್ಲಿಕ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು’ ಎಂದು ತಿಳಿಸಿದ್ದಾರೆ.
Leave a Comment