ಕ್ಷುದ್ರ ಶಕ್ತಿಯ ಎದುರು ರುದ್ರ ಶಕ್ತಿಯ ಸಮರ; ಹಿಂದೆಂದೂ ನೋಡಿರದ ಗೆಟಪ್ ನಲ್ಲಿ ಎಂಟ್ರಿ ಕೊಟ್ಟ ಗಣೇಶ್
![Pinka](https://news-arrow.com/wp-content/uploads/cwv-webp-images/2025/01/pinka.png.webp)
ನ್ಯೂಸ್ ಆ್ಯರೋ: ನಟ ಗಣೇಶ್ ಅವರು ರೊಮ್ಯಾಂಟಿಕ್ ಚಿತ್ರಗಳ ಮೂಲಕ ಹೆಚ್ಚು ಗಮನ ಸೆಳೆದವರು. ಅವರು ಸಿನಿಮಾಗಳ ಮೂಲಕ ನಗಿಸಿದ್ದಾರೆ, ಅಳಿಸಿದ್ದಾರೆ, ಭಾವನಾತ್ಮಕವಾಗಿ ಸೆಳೆದುಕೊಂಡಿದ್ದಾರೆ. ಹಾಡುಗಳ ಮೂಲಕ ಮನಸೂರೆಗೊಂಡಿದ್ದಾರೆ. ಆದರೆ, ಪ್ರೇಕ್ಷಕರನ್ನು ಭಯ ಬೀಳಿಸುವ ಕೆಲಸ ಅವರಿಂದ ಆಗಿರಲಿಲ್ಲ. ಈಗ ಅವರ ಹೊಸ ಸಿನಿಮಾ ಅನೌನ್ಸ್ ಮಾಡಿದ್ದು, ಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ‘ಪಿನಾಕ’ ಎಂಬ ಶೀರ್ಷಿಕೆ ಇಡಲಾಗಿದೆ.
ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಇತ್ತೀಚೆಗೆ ಗಣೇಶ್ ಜೊತೆ ಸಿನಿಮಾ ಮಾಡುವ ಬಗ್ಗೆ ಘೋಷಣೆ ಮಾಡಿತ್ತು. ಈಗ ಈ ಚಿತ್ರದ ಟೈಟಲ್ ಹಾಗೂ ಟೀಸರ್ ರಿಲೀಸ್ ಆಗಿದೆ. ಈ ಸಂಸ್ಥೆ ನಿರ್ಮಿಸುತ್ತಿರುವ 49ನೇ ಸಿನಿಮಾ ಇದಾಗಿದ್ದು, ಕನ್ನಡದಲ್ಲಿ ಇದು ಸಂಸ್ಥೆಯ ಎರಡನೇ ಪ್ರಯತ್ನ. ಈ ಚಿತ್ರಕ್ಕೆ ಧನಂಜಯ್ ನಿರ್ದೇಶನ ಮಾಡುತ್ತಿದ್ದಾರೆ. ಕೊರಿಯೋಗ್ರಾಫರ್ ಆಗಿ ಹೆಸರು ಮಾಡಿರೋ ಅವರು ಈಗ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ.
ಈ ಚಿತ್ರದ ಟೀಸರ್ ನೋಡಿದ ಕೆಲವರಿಗೆ ಗಣೇಶ್ ಮಾಟಗಾರನಂತೆಯೂ ಇನ್ನೂ ಕೆಲವರಿಗೆ ಅಘೋರಿಯಂತೆಯೂ ಕಾಣಿಸುತ್ತಾರೆ. ಆದರೆ, ಸಿನಿಮಾದಲ್ಲಿ ಇರೋದೇ ಬೇರೆ ಅನ್ನೋದು ಗಣೇಶ್ ಅಭಿಪ್ರಾಯ. ಸದ್ಯ ಸಿನಿಮಾಗೆ ಕಥೆ-ಚಿತ್ರಕಥೆ ಪೂರ್ಣಗೊಂಡಿದ್ದು, ಫೆಬ್ರವರಿಯಲ್ಲಿ ಶೂಟಿಂಗ್ ಆರಂಭ ಆಗಲಿದೆ. ‘ಕ್ಷುದ್ರ ಶಕ್ತಿಯ ಎದುರು ರುದ್ರ ಶಕ್ತಿಯ ಸಮರ’ ಎಂಬ ಸಾಲು ಟೀಸರ್ನಲ್ಲಿ ಬರುತ್ತದೆ. ಸಿನಿಮಾದಲ್ಲಿಯೂ ರುದ್ರ ಮತ್ತು ಕ್ಷುದ್ರದ ನಡುವಿನ ಸಂಘರ್ಷವಿದೆ ಎನ್ನುತ್ತಾರೆ ಗಣೇಶ್.
‘ಪಿನಾಕ’ ಪುರಾಣ ಮತ್ತು ಇತಿಹಾಸದ ಮಿಶ್ರಣದ ಕಥೆ ಹೊಂದಿದೆ. ಗಣೇಶ್ ಅವರಿಗೆ ರೊಮ್ಯಾಂಟಿಕ್ ಹೀರೋ ಪಾತ್ರಗಳನ್ನು ಮಾಡಿ ಅವರಿಗೆ ಏಕತಾನತೆ ಕಾಡಿತ್ತು. ಆಗ ಅವರಿಗೆ ಸಿಕ್ಕಿದ್ದು ಈ ಕಥೆ. ಈ ಚಿತ್ರದಲ್ಲಿ ಗಣೇಶ್ ಅವರಿಂದ ಬೇರೆಯದನ್ನೇ ನಿರೀಕ್ಷಿಸಬಹುದಾಗಿದೆ.
Leave a Comment