ಮಹಾಕುಂಭ ಮೇಳದ ಕರ್ತವ್ಯದಿಂದ ರಜೆ ಕೇಳಿದ 700 ಪೊಲೀಸರು; ಎಲ್ಲರೂ ನೀಡಿದ್ದು ಅದೊಂದೇ ಕಾರಣ !!
ನ್ಯೂಸ್ ಆ್ಯರೋ: 2025ರ ಜನವರಿಯಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯಲಿರುವ ಮಹಾ ಕುಂಭ ಮೇಳಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ಕುಂಭ ಮೇಳಕ್ಕೆ ಕೋಟಿಗಟ್ಟಲೆ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಅವರ ಭದ್ರತೆಗಾಗಿ ವಿವಿಧ ರಾಜ್ಯಗಳಿಂದ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದೆ. ಮಹಾಕುಂಭಕ್ಕೆ ಸುಮಾರು 6,000 ಪೊಲೀಸರನ್ನು ನಿಯೋಜಿಸಲಾಗಿದ್ದು, ಅಕ್ಟೋಬರ್ 25ರಿಂದ ನಿಯೋಜನೆ ಆರಂಭವಾಗಿದೆ. ಈ ಪೈಕಿ 1,200 ಸಿಬ್ಬಂದಿ ಡಿಸೆಂಬರ್‌ನಲ್ಲಿ ರಜೆಗಾಗಿ ಅರ್ಜಿ ಸಲ್ಲಿಸಿದ್ದಾರೆ.
ರಜೆಗಾಗಿ ಅರ್ಜಿ ಸಲ್ಲಿಸಿದ 1,200 ಪೊಲೀಸರಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ ಸುಮಾರು 700 ಪೊಲೀಸರು ಒಂದೇ ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಅವರ ಪತ್ನಿಯ ಹೆರಿಗೆ ಅಥವಾ ಅನಾರೋಗ್ಯದ ಕಾರಣ ನೀಡಿ ರಜೆ ಕೇಳಿದ್ದಾರೆ. ಕೆಲವು ಪೋಲೀಸರ ಪತ್ನಿಗೆ ಜನವರಿಯಲ್ಲಿ ಹೆರಿಗೆಯಾಗಲಿದ್ದು, ಇನ್ನು ಕೆಲವರ ಪತ್ನಿಯರಿಗೆ ಡಿಸೆಂಬರ್‌ನಲ್ಲಿ ಹೆರಿಗೆಯಾಗುವ ನಿರೀಕ್ಷೆಯಿದೆ.
ಮಹಾಕುಂಭದ ಭದ್ರತಾ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿರುವ ಅಧಿಕಾರಿಗಳನ್ನು ಈ ಅಸಾಮಾನ್ಯ ಪ್ರವೃತ್ತಿ ಆಶ್ಚರ್ಯಗೊಳಿಸಿದೆ. ಈ ಪೊಲೀಸರಲ್ಲಿ ಹೆಚ್ಚಿನವರು 2018 ಮತ್ತು 2023ರಲ್ಲಿ ನೇಮಕಗೊಂಡ ಕಾನ್ಸ್‌ಟೇಬಲ್‌ಗಳು. ಉತ್ತರ ಪ್ರದೇಶದ ಬಹುತೇಕ ಎಲ್ಲಾ ಜಿಲ್ಲೆಗಳ ಪೊಲೀಸರು ನಿಯೋಜನೆಯ ಭಾಗವಾಗಿದ್ದಾರೆ.
ಇದಲ್ಲದೇ ಪೋಷಕರ ಅನಾರೋಗ್ಯದ ಹಿನ್ನೆಲೆಯಲ್ಲಿ 250 ಪೊಲೀಸರು ರಜೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇತರರು ಸಂಬಂಧಿಕರ ‘ತೆಹ್ರ್ವಿ’ (ಸಾವಿನ ನಂತರ 13ನೇ ದಿನದ ಸಮಾರಂಭ) ಅಥವಾ ಅಂತಹುದೇ ಕಾರ್ಯಕ್ರಮಗಳಿಗೆ ಹಾಜರಾಗುವಂತಹ ವಿವಿಧ ಕಾರಣಗಳಿಗಾಗಿ ರಜೆ ಕೋರಿದ್ದಾರೆ.
Leave a Comment