1998 ಕೊಯಮತ್ತೂರು ಸರಣಿ ಬಾಂಬ್ ಸ್ಫೋಟ ಆರೋಪಿ ಸಾವು; ಅಂತ್ಯಸಂಸ್ಕಾರಕ್ಕೆ ಕಿಕ್ಕಿರಿದು ಸೇರಿದ ಜನ
ನ್ಯೂಸ್ ಆ್ಯರೋ: ಕೊಯಮತ್ತೂರಿನಲ್ಲಿ ನಡೆದ 1998ರ ಸರಣಿ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್, ಅಲ್–ಉಮ್ಮಾದ ಅಧ್ಯಕ್ಷ ಎಸ್. ಎ ಬಾಷಾ ಸಾವನ್ನಪ್ಪಿದ್ದು, ಆತನ ಅಂತ್ಯ ಸಂಸ್ಕಾರಕ್ಕೆ ತಮಿಳುನಾಡಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿರುವ ವಿಡಿಯೋ ವೈರಲ್ ಆಗುತ್ತಿದೆ.
ಹೌದು.. ಡಿಸೆಂಬರ್ 16ರ ಸಂಜೆ ವಯೋ ಸಹಜ ಖಾಯಿಲೆಯಿಂದ ಎಸ್ ಎ ಬಾಷಾ ಸಾವನ್ನಪ್ಪಿದ್ದು, ಅವರಿಗೆ 84 ವರ್ಷ ವಯಸ್ಸಾಗಿತ್ತು.
ಮೂಲಗಳ ಪ್ರಕಾರ 1998 ಕೊಯಮತ್ತೂರು ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮಾಸ್ಟರ್ ಮೈಂಡ್ ಆಗಿದ್ದ ಬಾಷಾ ಪೆರೋಲ್ ಮೇಲೆ ಹೊರಗಿದ್ದರು. ಆದರೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಬಾಷಾ ಚಿಕಿತ್ಸೆ ಫಲಕಾರಿಗದೇ ಸಾವನ್ನಪ್ಪಿದ್ದರು.
ಇನ್ನು ಬಾಷಾ ಅವರ ಕುಟುಂಬ ಸದಸ್ಯರು ದಕ್ಷಿಣ ಉಕ್ಕಡಂನಿಂದ ಹೈದರ್ ಅಲಿ ಟಿಪ್ಪು ಸುಲ್ತಾನ್ ಸುನ್ನತ್ ಜಮಾತ್ ಮಸೀದಿವರೆಗೆ ಮೆರವಣಿಗೆ ನಡೆಸಲು ಯೋಜಿಸಿದ್ದಾರೆ. ಈ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಷಾ ಮೃತದೇಹವನ್ನು ಆ್ಯಂಬುಲೆನ್ಸ್ ನಲ್ಲಿ ಮೆರವಣಿಗೆಯೊಂದಿಗೆ ದಕ್ಷಿಣ ಉಕ್ಕಡಂನಿಂದ ಹೈದರ್ ಅಲಿ ಟಿಪ್ಪು ಸುಲ್ತಾನ್ ಸುನ್ನತ್ ಜಮಾತ್ ಮಸೀದಿವರೆಗೆ ಮೆರವಣಿಗೆ ತೆಗೆದುಕೊಂಡು ಬಂದು ಅಂತ್ಯಸಂಸ್ಕಾರ ನೆರವೇರಿಸಿದರು. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು.
1998ರಲ್ಲಿ ಕೊಯಮತ್ತೂರಿನಲ್ಲಿ ನಡೆದ ಸರಣಿ ಸ್ಫೋಟಗಳಿಗೆ ಸಂಬಂಧಿಸಿದಂತೆ ಬಾಷಾ ಮತ್ತು ಇತರ 16 ಜನರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇತ್ತೀಚೆಗಷ್ಟೇ ಬಾಷಾ ಅವರಿಗೆ ಮದ್ರಾಸ್ ಹೈಕೋರ್ಟ್ ಪೆರೋಲ್ ಮಂಜೂರು ಮಾಡಿತ್ತು.
ಅಂತೆಯೇ ಬಾಷಾ ನಿಷೇಧಿತ ಸಂಘಟನೆ ಅಲ್–ಉಮ್ಮಾದ ಅಧ್ಯಕ್ಷರಾಗಿದ್ದು, 1998ರ ಫೆಬ್ರುವರಿ 14ರಂದು ಕೊಯಮತ್ತೂರಿನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಆಗಿದ್ದಾರೆ. ಸ್ಫೋಟದಲ್ಲಿ 58 ಜನರು ಮೃತಪಟ್ಟಿದ್ದು, ಸುಮಾರು 231 ಜನರು ಗಾಯಗೊಂಡಿದ್ದರು.
ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಅವರನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
Leave a Comment