ಬೋರ್‌ವೆಲ್‌ ಕೊರೆಸೋಕೆ ಹೊಸ ರೂಲ್ಸ್‌; ನಿಯಮ ಮೀರಿದರೆ ಜೈಲು ಫಿಕ್ಸ್‌

bore well
Spread the love

ನ್ಯೂಸ್ ಆ್ಯರೋ: ಕೊಳವೆ ಬಾವಿಗಳನ್ನು ಸಮರ್ಪಕವಾಗಿ ಮುಚ್ಚದೇ ಚಿಕ್ಕ ಮಕ್ಕಳು ಬಿದ್ದು ಆಗುವ ಅವಘಢಗಳಿಗೆ ಬ್ರೇಕ್‌ ಹಾಕುವ ನಿಟ್ಟಿನಲ್ಲಿ ಇರುವ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸುವ ಉದ್ದೇಶದಿಂದ ಕರ್ನಾಟಕ ಅಂತರ್ಜಲ (ಅಭಿವೃದ್ದಿ ಮತ್ತು ನಿರ್ವಹಣೆ ವಿನಿಮಯ ಹಾಗೂ ನಿಯಂತ್ರಣ) ಅಧಿನಿಯಮ 2011 ಮತ್ತು ನಿಯಮಾವಳಿ 2012 ಕ್ಕೆ ತಿದ್ದುಪಡಿಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.

ವಿಫಲ ಕೊಳವೆ ಬಾವಿಗಳನ್ನು ಸಮರ್ಪಕವಾಗಿ ಮುಚ್ಚದೇ ಇದ್ದಲ್ಲಿ ಡ್ರಿಲ್ಲಿಂಗ್‌ ಏಜೆನ್ಸಿ ಹಾಗೂ ಇಂಪ್ಲಿಮೆಂಟಿಂಗ್‌ ಏಜೆನ್ಸಿಗಳಿಗೆ 25 ಸಾವಿರ ದಂಡ ಹಾಗೂ 1 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸುವ ಮಸೂದೆ ಮಂಡಿಸಿ ವಿಧಾನಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಲಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ತಿಳಿಸಿದರು.

ಇಂದು ಬೆಳಗಾವಿ ಸುವರ್ಣ ವಿಧಾನಸೌಧದ ವಿಧಾನಸಭೇಯಲ್ಲಿ ಮಸೂದೆ ಅಂಗಿಕಾರವಾದ ನಂತರ ಪ್ರತಿಕ್ರಿಯೆ ನೀಡಿದರು. ವಿಫಲ ಕೊಳವೆ ಬಾವಿಗಳನ್ನು ಮುಚ್ಚದೇ ಇರುವ ಮೂಲಕ ಹಲವಾರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಪ್ರಕರಣಗಳಿಗೆ ಬ್ರೇಕ್‌ ಹಾಕುವುದು ಸರಕಾರದ ಉದ್ದೇಶವಾಗಿದೆ. ಈ ಹಿನ್ನಲೆಯಲ್ಲಿ ಈ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗಿದ್ದು ಇಂದು ವಿಧಾನಸಭೇಯಲ್ಲಿ ಅಂಗೀಕಾರವಾಗಿದೆ.

15 ದಿನಗಳ ಮುಂಚಿತವಾಗಿ ಮಾಹಿತಿ ನೀಡುವುದು ಕಡ್ಡಾಯ:

ಮಸೂದನೆಯ 11 ಏ ಸೆಕ್ಷನ್‌ ಪ್ರಕಾರ ಅಧಿಸೂಚಿತ ಪ್ರದೇಶ ಮತ್ತು ಅಧಿಸೂಚಿತವಲ್ಲದ ಪ್ರದೇಶಗಳಲ್ಲಿ ಕೊಳವೆಬಾವಿ ಕೊರೆಯಲು ಇಚ್ಚಿಸುವವರು ಸಂಬಂಧಪಟ್ಟ ಪಿಡಿಓ, ವಿಲೇಜ್‌ ಅಕೌಂಟೆಂಟ್‌, ಪಟ್ಟಣ ಪಂಚಾಯಿತಿ, ನಗರ ಸಭೆ ಮತ್ತು ಬಿಡಬ್ಲೂಎಸ್‌ಎಸ್‌ಬಿ ಸಂಬಂಧಿಸಿದ ವಾರ್ಡ್‌ ಇಂಜಿನೀಯರ್‌ಗಳಿಗೆ 15 ದಿನಗಳ ಮುಂಚಿತವಾಗಿ ಮಾಹಿತಿ ನೀಡಬೇಕು. ಇದನ್ನು ಉಲ್ಲಂಘಿಸಿದ ಡ್ರಿಲ್ಲಿಂಗ್‌ ಏಜೆನ್ಸಿ/ ಇಂಪ್ಲಿಮೆಂಟಿಂಗ್‌ ಏಜೆನ್ಸಿಗಳಿಗೆ ಐದು ಸಾವಿರ ರೂಪಾಯಿಗಳ ಜುಲ್ಮಾನೆ ಹಾಗೂ ಮೂರು ತಿಂಗಳ ಸಜೆಯನ್ನು ವಿಧಿಸಲಾಗುವುದು.

ವಿಫಲ ಕೊಳವೆ ಬಾವಿಗಳನ್ನು ಮುಚ್ಚುವುದು ಕಡ್ಡಾಯ:

ಕೊಳವೆ ಬಾವಿಗಳನ್ನು ಕೊರೆದ ನಂತರ ಡ್ರಿಲಿಂಗ್‌ ಏಜೆನ್ಸಿ ಮತ್ತು ಇಂಪ್ಲಿಮೆಂಟಿಂಗ್‌ ಏಜೆನ್ಸಿಗಳು ಕೊಳವೆ ಬಾವಿಗಳನ್ನು ಸ್ಟೀಲ್‌ ಕ್ಯಾಪ್‌ ಹಾಕಿ ಮುಚ್ಚವುದು ಕಡ್ಡಾಯವಾಗಿದೆ. ವಿಫಲ ಕೊಳವೆ ಬಾವಿಯನ್ನು ಕೆಸರು ಮಣ್ಣು ತುಂಬಿ ಮುಚ್ಚಬೇಕು ಹಾಗೂ 2×2 ಅಡಿಯ ದಿಬ್ಬ ಮಾಡಿ ದಿಬ್ಬಕ್ಕೆ ಫೆನ್ಸಿಂಗ್. ಡ್ರಿಲಿಂಗ್‌ ಏಜೆನ್ಸಿ ಮತ್ತು ಇಂಪ್ಲಿಮೆಂಟಿಂಗ್‌ ಏಜೆನ್ಸಿಗಳು ಕೊಳವೆ ಬಾವಿ ಕೊರೆದ 24 ಗಂಟೆಯೊಳಗೆ ಮುಚ್ಚಿರುವ ಬಗ್ಗೆ ಫೋಟೋ ತಗೆದು ಸುರಕ್ಷಿತವಾಗಿ ಮುಚ್ಚಿರುವುದನ್ನು ತಪಾಸಣೆ ಮಾಡಿ ಧೃಢೀಕರಿಸಬೇಕು. ಈ ಬಗ್ಗೆ ಜಾಯಿಂಟ್‌ ಡಿಕ್ಲರೇಷನ್‌ ಅನ್ನು ಸ್ಥಳೀಯ ಪ್ರಾಧಿಕಾರಕ್ಕೆ ಸಲ್ಲಿಸುವುದು ಕಡ್ಡಾಯಗೊಳಿಸಲಾಗಿದೆ.

ಅಲ್ಲದೇ, ಜಮೀನಿನ ಮಾಲೀಕರು ಕೊಳವೆ ಬಾವಿ ರಿಪೇರಿ ಮಾಡಲು ಪಂಪ್‌ ಅನ್ನು ಹೊರ ತಗೆದಾಗ ಕೊಳವೆಬಾವಿಗೆ ಕ್ಯಾಪ್‌ ಹಾಕಿ ಮುಚ್ಚಬೇಕು. ಕೊಳವೆ ಬಾವಿಯನ್ನು ಪುನಃಶ್ಚೇತನ ಮಾಡಲು ಇಚ್ಚಿಸಿದಲ್ಲಿ ಜಮೀನು ಮಾಲೀಕರು ಕೊಳವೆ ಬಾವಿಗೆ ಮುಚ್ಚಳದಿಂದ ಮುಚ್ಚಿ ಸುರಕ್ಷತೆಯನ್ನು ಕಾಪಾಡಬೇಕು.

ಕೊಳವೆ ಬಾವಿ ಕೊರೆಯುವಾಗ ಸೈನ್‌ ಬೋರ್ಡ್‌ ಕಡ್ಡಾಯ:

ಇನ್ನೂ ಕೊಳವೆ ಬಾವಿಯನ್ನು ಕೊರೆಯುವಾಗ ಎಲ್ಲರಿಗೂ ಕಾಣುವ ರೀತಿಯಲ್ಲಿ ಕೊಳವೆ ಬಾವಿ ಕೊರೆಯುತ್ತಿರುವ ಬಗ್ಗೆ ಎಚ್ಚರಿಕೆಯ ಬೋರ್ಡ್‌ ಅನ್ನು ಪ್ರದರ್ಶಿಸಬೇಕು. ಯಾವುದೇ ಅವಘಡಗಳು ಆಗದಂತೆ ಎಚ್ಚರವಹಿಸುವುದು ಕಡ್ಡಾಯವಾಗಿದೆ ಇದಕ್ಕಾಗಿ ಸುತ್ತಲೂ ಫೆನ್ಸಿಂಗ್‌ ನಿರ್ಮಿಸಿಕೊಳ್ಳಬೇಕು.

ಸ್ಥಳೀಯ ಪ್ರಾಧಿಕಾರ / ಅಧಿಕಾರಿಗಳ ಜವಾಬ್ದಾರಿ:

ಸ್ಥಳೀಯ ಪ್ರಾಧಿಕಾರ ಅಥವಾ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕೊಳವೆ ಬಾವಿ ಕೊರೆಯುವ ಸಂಧರ್ಭದಲ್ಲಿ ಕೈಗೊಳ್ಳಬೇಕಾದ ಎಚ್ಚರಿಕೆಯ ಅಂಶಗಳನ್ನು ಪಾಲಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ತಮ್ಮ ವ್ಯಾಪ್ತಿಯಲ್ಲಿ ಕೊರೆಸಲಾಗುತ್ತಿರುವ ಕೊಳವೆ ಬಾವಿಗಳ ಬಗ್ಗೆ ಅಂತರ್ಜಲ ಅಭಿವೃದ್ದಿ ಇಲಾಖೆಗೆ ಮಾಹಿತಿಯನ್ನು ಸಲ್ಲಿಸಬೇಕು. ಇಂಪ್ಲಿಮೆಂಟಿಂಗ್‌ ಏಜೆನ್ಸಿಯವರು ಸಹ ಕೊಳವೆ ಬಾವಿಯನ್ನು ಮುಚ್ಚುವ ಬಗ್ಗೆ ನಿಗಾವಹಿಸುವಬೇಕು. ಅಲ್ಲದೇ ಪಿಡಿಓ ಗಳು ಗ್ರಾಮ ಪಂಚಾಯತ್‌ ಕಚೇರಿಯಲ್ಲಿ ಕೊಳವೆ ಬಾವಿ ಮುಚ್ಚುವ ವಿಧಾನಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಬೋರ್ಡ್‌ ಹಾಕುವುದನ್ನು ಕಡ್ಡಾಯಗೊಳಿಸಲಾಗಿವೆ ಎಂದು ಸಚಿವರಾದ ಎನ್‌ ಎಸ್‌ ಭೋಸರಾಜು ತಿಳಿಸಿದರು.

ಜೈಲು ಶಿಕ್ಷೆ ಹಾಗೂ ದಂಡ:

ಇಂಪ್ಲಿಮೆಂಟಿಂಗ್‌ ಏಜೆನ್ಸಿ ಹಾಗೂ ಡ್ರಿಲ್ಲಿಂಗ್‌ ಏಜೆನ್ಸಿಗಳು ಮಸೂದೆಯ 11 ಏ ಸೆಕ್ಷನ್‌ನಲ್ಲಿರುವ ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಹತ್ತು ಸಾವಿರ ಜುಲ್ಮಾನೆ ಹಾಗೂ ಒಂದು ವರ್ಷ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ. ಸೆಕ್ಷನ್‌ 21 ಏ ನಿಯಮಗಳನ್ನು ಯನ್ನು ಉಲ್ಲಂಘಿಸುವ ಇಂಪ್ಲಿಮೆಂಟಿಂಗ್‌ ಏಜೆನ್ಸಿ/ ಡ್ರಿಲ್ಲಿಂಗ್‌ ಏಜೆನ್ಸಿಗಳು / ಸರ್ವಿಸಿಂಗ್‌ ಏಜೆನ್ಸಿಗಳಿಗೆ 25 ಸಾವಿರ ರೂಪಾಯಿಗಳ ಜುಲ್ಮಾನೆ ಹಾಗೂ ಒಂದು ವರ್ಷದ ಜೈಲು ಶಿಕ್ಷೆಯನ್ನು ವಿಧಿಸುವ ಅವಕಾಶವನ್ನು ಈ ಮಸೂದೆಯಲ್ಲಿ ಅಳವಡಿಸಲಾಗಿದೆ. ಅಲ್ಲದೇ, ತಮ್ಮ ಜವಾಬ್ದಾರಿ/ಕರ್ತವ್ಯಗಳನ್ನು ನಿಭಾಯಿಸುವಲ್ಲಿ ವಿಫಲವಾಗುವ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಲು ಮಸೂದೆಯಲ್ಲಿ ನಿಯಮಗಳನ್ನು ಅಳವಡಿಸಲಾಗಿದೆ.

ಹೆಚ್ಚುತ್ತಿರುವ ಕೊಳವೆ ಬಾವಿಗಳಿಂದ ರಾಜ್ಯದಲ್ಲಿ ದಿನೇ ದಿನೇ ಅಂತರ್ಜಲ ಕುಸಿಯುತ್ತಿದೆ. ಇದನ್ನು ತಡೆಗಟ್ಟುವುದು ಹಾಗೂ ಕೊಳವೆ ಬಾವಿಗಳನ್ನು ಸಮರ್ಪಕವಾಗಿ ಮುಚ್ಚದೇ ಆಗುವ ಅವಘಢಗಳಿಗೆ ಬ್ರೇಕ್‌ ಹಾಕುವುದು ನಮ್ಮ ಉದ್ದೇಶವಾಗಿದೆ. ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದ್ದು, ವಿಧಾನ ಪರಿಷತ್‌ನಲ್ಲೂ ಪ್ರಸ್ತುತ ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಗುವುದು.

Leave a Comment

Leave a Reply

Your email address will not be published. Required fields are marked *

error: Content is protected !!