ಡಿಸೆಂಬರ್ 16 ರಂದು ವಿಜಯ್ ದಿವಸ್ ಎಂದು ಆಚರಿಸುವುದು ಏಕೆ?; ಇಲ್ಲಿದೆ ಈ ಕುರಿತು ಮಹತ್ವದ ಮಾಹಿತಿ
ನ್ಯೂಸ್ ಆ್ಯರೋ: 1971, ಡಿಸೆಂಬರ್ 16ರಂದು ಭಾರತ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಗೆಲುವು ಸಾಧಿಸಿದ್ದಾಗಿ ಘೋಷಿಸಿತು. ಆ ದಿನ ಪಾಕಿಸ್ತಾನಿ ಸೇನೆ ಭಾರತೀಯ ಸೇನೆಯ ಮುಂದೆ ಶರಣಾಯಿತು.
1971 ರ ಯುದ್ಧದಲ್ಲಿ ಭಾರತ ಪಾಕಿಸ್ತಾನದ ಎದುರು ಗೆಲುವು ಸಾಧಿಸಿ, 50 ವರ್ಷಗಳು ಪೂರ್ಣಗೊಂಡವು. ಆ ಯುದ್ಧದ ಪರಿಣಾಮವಾಗಿ ನೂತನ ದೇಶವಾಗಿ ಬಾಂಗ್ಲಾದೇಶ ಉದಯವಾಯಿತು. ಅಂದಿನಿಂದ ಈ ದಿನವನ್ನು ‘ವಿಜಯ ದಿವಸ್’ ಎಂದು ದೇಶಾದ್ಯಂತ ಆಚರಿಸಲಾಗುತ್ತದೆ. ವಿಜಯ ದಿವಸದಂದು ರಕ್ಷಣಾ ಪಡೆಗಳ ತ್ಯಾಗವನ್ನು ನೆನೆಯಲಾಗುತ್ತದೆ.
ವಿಜಯ ದಿವಸ: ಇತಿಹಾಸ ಮತ್ತು ಪ್ರಾಮುಖ್ಯತೆ:
1971ರ ಯುದ್ಧ ಕೇವಲ ಬಾಂಗ್ಲಾದೇಶದ ಉದಯಕ್ಕೆ ಮಾತ್ರ ಕಾರಣವಾಗಿದ್ದಲ್ಲ. ಅದರೊಡನೆ ಪಾಕಿಸ್ತಾನಕ್ಕೆ ಸಹಿಸಲಾರದ ಹೊಡೆತವನ್ನೂ ನೀಡಿತ್ತು. ಪಾಕಿಸ್ತಾನಿ ಸೇನೆಯ ಮಹಾ ದಂಡನಾಯಕ ಅಬ್ದುಲ್ಲಾ ಖಾನ್ ನಿಯಾಜಿ಼ ಭಾರತೀಯ ಸೇನೆ ಹಾಗೂ ಬಾಂಗ್ಲಾದೇಶದ ಮುಕ್ತಿ ಬಾಹಿನಿಯ ಬಳಿ ಶರಣಾಗತಿಗೆ ಸಹಿ ಹಾಕಿದ್ದು ಏಷ್ಯಾ ಉಪಖಂಡದಲ್ಲಿ ಭಾರತದ ನಾಯಕತ್ವಕ್ಕೆ ಭದ್ರ ಬುನಾದಿ ಹಾಕಿತ್ತು. ಮೇಜರ್ ಜನರಲ್ ನಿಯಾಜಿ಼ ತನ್ನ 93,000 ಸೈನಿಕರ ಪಡೆಯೊಂದಿಗೆ ಭಾರತೀಯ ಸೇನಾ ಲೆಫ್ಟಿನೆಂಟ್ ಜನರಲ್ ಜಗಜಿತ್ ಸಿಂಗ್ ಅರೋರಾ ಅವರ ಮುಂದೆ ಶರಣಾದರು. ಆಗ ಜಗಜಿತ್ ಸಿಂಗ್ ಅವರು ಭಾರತೀಯ ಸೇನೆಯ ಪೂರ್ವ ಕಮಾಂಡಿನ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆಗಿದ್ದರು. ಪಾಕಿಸ್ತಾನದ ಶರಣಾಗತಿ ಎರಡನೇ ಮಹಾಯುದ್ಧದ ಬಳಿಕದ ಅತಿದೊಡ್ಡ ಸಂಖ್ಯೆಯ ಸೇನಾ ಶರಣಾಗತಿ ಎನಿಸಿಕೊಂಡಿತು.
1971ರ ಯುದ್ಧ ಪೂರ್ವ ಪಾಕಿಸ್ತಾನದ ಬಂಗಾಳಿ ಭಾಷಿಕ ಬಹುಸಂಖ್ಯಾತರ ಮೇಲೆ ಪಾಕಿಸ್ತಾನ ಸೇನೆಯ ದುರ್ನಡತೆಯ ಕಾರಣದಿಂದ ಉಂಟಾಗಿತ್ತು. 1970ರಲ್ಲಿ ನಡೆದ ಪಾಕಿಸ್ತಾನದ ಚುನಾವಣೆಯಲ್ಲಿ ಪೂರ್ವ ಪಾಕಿಸ್ತಾನ ಮೂಲದ, ಶೇಖ್ ಮುಜಿಬುರ್ ರೆಹಮಾನ್ ನೇತೃತ್ವದ ಆವಾಮಿ ಲೀಗ್ ಜಯಶಾಲಿಯಾಗಿತ್ತು. ಆದರೆ ಪಾಕಿಸ್ತಾನಿ ಸೇನೆ ಬಲಪ್ರಯೋಗ ನಡೆಸಿ, ಆವಾಮಿ ಲೀಗ್ ಅಧಿಕಾರಕ್ಕೆ ಬರದಂತೆ ಮಾಡಲು ಪ್ರಯತ್ನಿಸಿತು. ಈ ದಾಳಿಗಳ ಪರಿಣಾಮವಾಗಿ ಅಸಂಖ್ಯಾತ ಬಾಂಗ್ಲಾದೇಶೀಯರು ಗಡಿ ದಾಟಿ ಭಾರತಕ್ಕೆ ಪಲಾಯನ ಮಾಡತೊಡಗಿದರು. ಇದು ಭಾರತ ಮಧ್ಯ ಪ್ರವೇಶಿಸುವುದು ಅನಿವಾರ್ಯವಾಗುವಂತೆ ಮಾಡಿತು.
ಪಾಕಿಸ್ತಾನ ಅನಿರೀಕ್ಷಿತವಾಗಿ ಭಾರತದ ವಾಯುನೆಲೆಗಳ ಡಿಸೆಂಬರ್ 3, 1971ರಂದು ದಾಳಿ ನಡೆಸಿತು. ಅದಾದ ಒಂದು ದಿನದ ಬಳಿಕ ಭಾರತ ಬಾಂಗ್ಲಾದೇಶೀ ರಾಷ್ಟ್ರೀಯವಾದಿಗಳಿಗೆ ಬೆಂಬಲ ನೀಡಲು ನಿರ್ಧರಿಸಿತು. ಅದರಂತೆ ಆಪರೇಶನ್ ಟ್ರೈಡೆಂಟ್ಗೆ ಚಾಲನೆ ನೀಡಿ, ಆಗಿನ ಪಶ್ಚಿಮ ಪಾಕಿಸ್ತಾನದಲ್ಲಿದ್ದ ಕರಾಚಿ ಬಂದರಿನ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿತು. ಪೂರ್ವ ಪಾಕಿಸ್ತಾನದಲ್ಲಿ ಮುಕ್ತಿ ಬಾಹಿನಿಯ ಗೆರಿಲ್ಲಾ ಯೋಧರು ಭಾರತೀಯ ಸೇನೆಯೊಡನೆ ಕೈ ಜೋಡಿಸಿ, ಪಾಕಿಸ್ತಾನಿ ಸೇನೆಯನ್ನು ಸೋಲಿಸಿದರು.
Leave a Comment