ಬಿಜೆಪಿ ನಾಯಕ ಎಲ್‌ಕೆ ಅಡ್ವಾಣಿ ಆಸ್ಪತ್ರೆಗೆ ದಾಖಲು; ವೈದ್ಯರು ಹೇಳಿದ್ದೇನು?
ನ್ಯೂಸ್ ಆ್ಯರೋ: ಬಿಜೆಪಿ ಭೀಷ್ಮ, ಹಿರಿಯ ನಾಯಕ, ಮಾಜಿ ಉಪ ಪ್ರಧಾನಿ ಎಲ್‌ಕೆ ಅಡ್ವಾಣಿ ಅವರು ವಯೋಸಹಜ ಅನಾರೋಗ್ಯದಿಂದ ಇಂದು ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.
97 ವರ್ಷ ವಯಸ್ಸಿನ ಎಲ್‌ಕೆ ಅಡ್ವಾಣಿ ಅವರು ಕಳೆದ ಕೆಲ ಸಮಯಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು (ಡಿ.14) ಆರೋಗ್ಯದಲ್ಲಿ ದಿಢೀರ್ ಏರುಪೇರು ಉಂಟಾದ ಕಾರಣ ಅವರನ್ನು ನವದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾಲ್‌ಕೃಷ್ಣ ಅಡ್ವಾಣಿ ಅವರು ಆಸ್ಪತ್ರೆಗೆ ದಾಖಲಾಗಿದ್ದರಿಂದ ಮಥುರಾ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಬಿಗಿಭದ್ರತೆ ನಿಯೋಜನೆ ಮಾಡಲಾಗಿದೆ.
ಸದ್ಯ ಎಲ್‌ಕೆ ಅಡ್ವಾಣಿ ಅವರನ್ನು ತಜ್ಞ ವೈದ್ಯರ ನಿಗಾದಲ್ಲಿ ಇರಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಮಾಹಿತಿ ಪ್ರಕಾರ, ದೇಶದ ಮಾಜಿ ಗೃಹ ಸಚಿವ ಮತ್ತು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ದಿನನಿತ್ಯದ ತಪಾಸಣೆಗಾಗಿ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಸದ್ಯ ಅವರು ವೈದ್ಯರ ನಿಗಾದಲ್ಲಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ.
ಕಳೆದ ಎರಡು ವಾರಗಳಿಂದ ಎಲ್‌ಕೆ ಅಡ್ವಾಣಿ ಅವರ ಆರೋಗ್ಯದಲ್ಲಿ ಆಗಾಗ ಅನಾರೋಗ್ಯ ಕಂಡುಬರುತ್ತಿತ್ತು. ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಕೂಡ ಅಡ್ವಾಣಿ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರು ನರರೋಗ ತಜ್ಞ ಡಾ. ವಿನೀತ್ ಸೂರಿ ಅವರ ನಿಗಾದಲ್ಲಿದ್ದು, ಅವರ ಆರೋಗ್ಯ ಸುಧಾರಿಸಿದ ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು.
ಅದಕ್ಕೂ ಒಂದು ತಿಂಗಳ ಮೊದಲು, ಜೂನ್ 26 ರಂದು ರಾತ್ರಿ 10:30 ಕ್ಕೆ ಅವರನ್ನು ಚಿಕಿತ್ಸೆಗಾಗಿ ದೆಹಲಿ ಏಮ್ಸ್‌ನ ಮೂತ್ರಶಾಸ್ತ್ರ ವಿಭಾಗಕ್ಕೆ ದಾಖಲಿಸಲಾಗಿತ್ತು. ಡಾ.ಅಮ್ಲೇಶ್ ಸೇಠ್ ನೇತೃತ್ವದಲ್ಲಿ ಚಿಕಿತ್ಸೆ ಪಡೆದು ಮರುದಿನ ಡಿಸ್ಚಾರ್ಜ್ ಮಾಡಲಾಗಿತ್ತು. ಮಾರ್ಚ್ 30, 2024 ರಂದು ಎಲ್‌ಕೆ ಅಡ್ವಾಣಿ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾರತರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರು.
Leave a Comment