ಡಾ.ರಾಜ್​ಕುಮಾರ್-ಎಸ್​ಎಂ ಕೃಷ್ಣ ಮಧ್ಯೆ ಆಗಿತ್ತು ಒಪ್ಪಂದ; ಅದನ್ನು ಮೀರಿದಾಗ ನಡೆದಿತ್ತು ರಾಜ್ ಅಪಹರಣ

Dr.Rajkumar and veerappan
Spread the love

ನ್ಯೂಸ್ ಆ್ಯರೋ: 2000ನೇ ಇಸವಿಯ ಜುಲೈ 30ರ ರಾತ್ರಿ ಪತ್ನಿ ಪಾರ್ವತಮ್ಮ ಅವರೊಂದಿಗೆ ತಮ್ಮ ಹುಟ್ಟೂರು ಗಾಜನೂರಿಗೆ ಹೋಗಿದ್ದ ಡಾ. ರಾಜ್ ಕುಮಾರ್ ಅವರನ್ನು ಕಾಡುಗಳ್ಳ, ನರಹಂತಕ ವೀರಪ್ಪನ್ ಅಪಹರಿಸಿದ್ದ. ಆ ಸುದ್ದಿ ರಾಜ್ಯದ ಜನತೆಗೆ ಮರುದಿನ ಬೆಳಿಗ್ಗೆ ಬರಸಿಡಿಲಿನಂತೆ ಅಪ್ಪಳಿಸಿತ್ತು.

ಈ ಘಟನೆ ನಡೆದ 108 ದಿನಗಳ ಬಳಿಕ ರಾಜ್ ಕುಮಾರ್ ಬಿಡುಗಡೆಯಾಗಿ ಮನೆಗೆ ಮರಳಿದ್ದು. ನಂತರ ಅಣ್ಣಾವ್ರು ಅಭಿಮಾನಿ ದೇವರುಗಳ ಜತೆಗೆ ಇದ್ದದ್ದು ಆರು ವರ್ಷ ಮಾತ್ರ. ಆದರೆ, ರಾಜ್ ಕುಮಾರ್ ಅಪಹರಣದ ಸಂದರ್ಭದಲ್ಲಿ ರಾಜ್ಯದಾದ್ಯಂತ ಉಂಟಾದ ಗದ್ದಲ, ಪ್ರತಿಭಟನೆ, ಜನರ ಕಣ್ಣೀರು, ಸರ್ಕಾರದಲ್ಲಿಯೂ ಮೂಡಿಸಿದ ಕೋಲಾಹಲವನ್ನು ಕಂಡವರಿಗೆ, 24 ವರ್ಷಗಳು ಕಳೆದಿದ್ದರೂ ಈ ಕರಾಳ ಘಟನೆಯನ್ನು ಮರೆಯಲು ಸಾಧ್ಯವಾಗದು.

ಅಂದು ರಾಜ್​ಕುಮಾರ್ ಅವರಿಗೂ ಕರ್ನಾಟಕ ಸರ್ಕಾರಕ್ಕೂ ಒಂದು ಒಪ್ಪಂದ ಆಗಿತ್ತು. ಆದರೆ, ಇದನ್ನು ಅಣ್ಣಾವ್ರು ಮೀರಿದಾಗ ಎಡವಟ್ಟು ಸಂಭವಿಸಿತ್ತು. ರಾಜ್​ಕುಮಾರ್ ಅವರಿಗೆ ವೀರಪ್ಪನ್ ಕಡೆಯಿಂದ ತೊಂದರೆ ಇದೆ ಎಂಬ ಸೂಚನೆ ರಾಜ್ಯ ಸರ್ಕಾರಕ್ಕೆ ಮೊದಲೇ ಇತ್ತು. ಈ ಕಾರಣದಿಂದಲೇ ರಾಜ್​ಕುಮಾರ್ ಜೊತೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಗಾಜನೂರಿನ ಭಾಗಕ್ಕೆ ತೆರಳೋದಾದರೆ ರಾಜ್ಯ ಸರ್ಕಾರಕ್ಕೆ ಮೊದಲೇ ತಿಳಿಸಬೇಕು ಎಂದು ಹೇಳಿತ್ತು. ಇದಕ್ಕೆ ರಾಜ್​ಕುಮಾರ್ ಕೂಡ ಒಪ್ಪಿದ್ದರು.

ಪ್ರತಿ ಬಾರಿಯೂ ಗಾಜನೂರಿಗೆ ತೆರಳುವಾಗ ರಾಜ್​ಕುಮಾರ್ ಅವರು ಸರ್ಕಾರಕ್ಕೆ ತಿಳಿಸುತ್ತಿದ್ದರು. ಆಗ ಅಣ್ಣಾವ್ರಿಗೆ ಸೂಕ್ತ ಪೊಲೀಸ್ ಬಧ್ರತೆಯನ್ನು ಸರ್ಕಾರ ಒದಗಿಸುತ್ತಿತ್ತು. ಆದರೆ, ಅಂದು ಮಾತ್ರ ಅವರು ರಾಜ್ಯ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡಿರಲಿಲ್ಲ. ನೇರವಾಗಿ ಗಾಜನೂರಿಗೆ ತೆರಳಿದರು. ಈ ವೇಳೆ ವೀರಪ್ಪನ್​ ಕಡೆಯವರು ಬಂದು ರಾಜ್​ಕುಮಾರ್​ನ ಕರೆದುಕೊಂಡು ಹೋದರು. ಇದು ಸರ್ಕಾರಕ್ಕೆ ಹಾಗೂ ಅಣ್ಣಾವ್ರ ಕುಟುಂಬಕ್ಕೆ ದೊಡ್ಡ ಆಘಾತ ನೀಡಿತ್ತು. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಥಿಯೇಟರ್​ಗಳು ಮುಚ್ಚಿದ್ದವು. 108 ದಿನಗಳ ಬಳಿಕ ಅವರನ್ನು ಮರಳಿ ಕರೆ ತರಲಾಯಿತು. ಈ ವೇಳೆ ಕೃಷ್ಣ ಅವರು ಸಾಕಷ್ಟು ಶ್ರಮ ಹಾಕಿದ್ದರು.

ರಾಜ್ ಕುಮಾರ್ ಅವರ ತಾಯಿಯ ಊರು ಗಾಜನೂರು. ಇಲ್ಲಿಯೇ ಹುಟ್ಟಿ ಬೆಳೆದ ರಾಜ್ ಕುಮಾರ್ ಅವರಿಗೆ ಹುಟ್ಟೂರನ್ನು ಕಂಡರೆ ಅಪಾರ ಪ್ರೀತಿ. ಅಭಿನಯಿಸುತ್ತಿದ್ದಾಗ, ನಟನೆಯಿಂದ ದೂರವಾದ ಬಳಿಕವೂ ಅವರು ಆಗಾಗ ಗಾಜನೂರಿಗೆ ಬರುತ್ತಿದ್ದರು. ಅಲ್ಲಿನ ತೋಟದ ಮನೆಯಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಆ ಜಮೀನಿನಲ್ಲಿ ಕೊರೆಯಿಸಿದ ಕೊಳವೆ ಬಾವಿಯಲ್ಲಿ ನೀರು ಬಂದಿರುವ ಸಂತಸದ ಸುದ್ದಿ ತಿಳಿದ ರಾಜ್ ಕುಮಾರ್, ಪಾರ್ವತಮ್ಮ ಮತ್ತು ಇತರೆ ಕೆಲವು ಸಂಬಂಧಿಕರೊಂದಿಗೆ ಅಲ್ಲಿಗೆ ತೆರಳಿದ್ದರು.

ರಾಜ್ ಕುಮಾರ್ ಅವರು ಗಾಜನೂರಿಗೆ ಬಂದಿದ್ದ ಸಂಗತಿ ವೀರಪ್ಪನ್ ಕಿವಿಗೆ ಬಿದ್ದಿತ್ತು. ಕೂಡಲೇ ಸಂಚು ರೂಪಿಸಿ ಗಾಜನೂರಿನ ತೋಟದ ಮನೆಯಿಂದ ರಾಜ್ ಕುಮಾರ್ ಹಾಗೂ ಇತರೆ ಮೂವರನ್ನು ರಾತ್ರಿ ಅಪಹರಿಸಿ ಕರೆದೊಯ್ದಿದ್ದ. ಗಾಬರಿಗೊಂಡ ಪಾರ್ವತಮ್ಮ ಹಾಗೂ ಇತರರು ಚಾಮರಾಜನಗರಕ್ಕೆ ಬಂದು ಎಸ್‌ಟಿಡಿ ಬೂತ್ ಮೂಲಕ ಮಕ್ಕಳು ಹಾಗೂ ಇತರರಿಗೆ ಅಪಹರಣದ ಮಾಹಿತಿ ನೀಡಿದ್ದರು.

ರಾತ್ರಿ ಊಟ ಮುಗಿಸಿ ಹಳೆಯ ಮನೆಯ ಹಜಾರದಲ್ಲಿ ಎಲೆ ಅಡಿಕೆ ಹಾಕಿಕೊಳ್ಳುತ್ತಾ ಟಿ.ವಿ. ನೋಡುತ್ತಾ ಕುಳಿತಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಸುಮಾರು 15 ಸಹಚರರ ಜತೆಗೆ ಮನೆಗೆ ನುಗ್ಗಿದ್ದ ವೀರಪ್ಪನ್, ರಾಜ್ ಕುಮಾರ್ ಅವರ ಬೆನ್ನಿಗೆ ಬಂದೂಕು ಇರಿಸಿ ಕೈಗಳನ್ನು ನೈಲಾನ್ ಹಗ್ಗದಿಂದ ಕಟ್ಟಿದ್ದ. ಪೊಲೀಸರಿಗೆ ಮಾಹಿತಿ ನೀಡಿದರೆ ಕೊಂದು ಬಿಡುತ್ತೇವೆ ಎಂದು ಬೆದರಿಕೆ ಪಾರ್ವತಮ್ಮ ಅವರ ಕೈಗೆ ಕ್ಯಾಸೆಟ್‌ವೊಂದನ್ನು ನೀಡಿದ್ದ. ಅದರಲ್ಲಿ ತನ್ನ ಬೇಡಿಕೆಗಳನ್ನು ಹೇಳಿದ್ದು, ಅದನ್ನು ಸರ್ಕಾರಕ್ಕೆ ತಲುಪಿಸುವಂತೆ ಹೇಳಿದ್ದ.

ರಾಜ್ ಕುಮಾರ್ ಅವರೊಂದಿಗೆ ಅವರ ಅಳಿಯ ಎಸ್‌ಎ ಗೋವಿಂದರಾಜ್, ಸಹ ನಿರ್ದೇಶಕ ನಾಗಪ್ಪ ಮಾರಡಗಿ, ಸಂಬಂಧಿ ನಾಗೇಶ್ ಅವರನ್ನು ವೀರಪ್ಪನ್ ಅಪಹರಿಸಿ ಕರೆದುಕೊಂಡು ಹೋಗಿದ್ದ. ರಾತ್ರಿ 1.30ರ ವೇಳೆ ಪಾರ್ವತಮ್ಮ ರಾಜ್ ಕುಮಾರ್, ಬೆಂಗಳೂರಿಗೆ ಧಾವಿಸಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರನ್ನು ಭೇಟಿ ಮಾಡಿದ್ದರು. ಎಸ್ ಎಂ ಕೃಷ್ಣ ಬೆಳಿಗ್ಗೆಯೇ ತಮಿಳುನಾಡಿಗೆ ತೆರಳಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಜತೆ ಸಭೆ ನಡೆಸಿದ್ದರು.

ನಂತರ ನಡೆದಿದ್ದು 108 ದಿನಗಳ ಆತಂಕ, ಭಯ, ಪ್ರತಿಭಟನೆ. ಚಿತ್ರರಂಗ ಅಕ್ಷರಶಃ ಸ್ಥಗಿತಗೊಂಡಿತ್ತು. ಆರಾಧ್ಯ ದೈವ ರಾಜ್ ಕುಮಾರ್ ಕ್ಷೇಮವಾಗಿ ಬರಲಿ ಎಂದು ಪ್ರತಿನಿತ್ಯ ಪೂಜೆ ಹೋಮ ಹವನಗಳನ್ನು ನಡೆಸಿದರು. ಸತತ ಪ್ರಯತ್ನ, ಸಂಧಾನಗಳ ಬಳಿಕ 2000ದ ನವೆಂಬರ್ 15ರಂದು ರಾಜ್ ಕುಮಾರ್ ಅವರನ್ನು ವೀರಪ್ಪನ್ ಬಿಡುಗಡೆ ಮಾಡಿದ್ದ. ಇದಾಗಿ ನಾಲ್ಕು ವರ್ಷಗಳ ಬಳಿಕ 2004ರ ಅ. 18ರಂದು ವೀರಪ್ಪನ್‌ನನ್ನು ಎಸ್‌ಟಿಎಫ್ ಪಡೆ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿತ್ತು.

Leave a Comment

Leave a Reply

Your email address will not be published. Required fields are marked *

error: Content is protected !!