ದರ್ಶನ್​ ಮಧ್ಯಂತರ ಜಾಮೀನು ಅವಧಿ ವಿಸ್ತರಣೆ; ದಾಸನಿಗೆ ತಾತ್ಕಾಲಿಕ ರಿಲೀಫ್

Darshan
Spread the love

ನ್ಯೂಸ್ ಆ್ಯರೋ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಎ2 ಆಗಿರುವ ನಟ ದರ್ಶನ್​ ಅವರಿಗೆ ಈಗ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಅವರ ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಸದ್ಯ ಅವರು ಬೆನ್ನು ನೋವಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂದಿನ ದಿನಾಂಕದವರೆಗೂ ಮಧ್ಯಂತರ ಜಾಮೀನು ವಿಸ್ತರಣೆ ಮಾಡಿ ಹೈಕೋರ್ಟ್ ಆದೇಶ ನೀಡಿದೆ. ಇಂದು (ಡಿಸೆಂಬರ್​ 9) ಹೈಕೋರ್ಟ್​ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದಿದೆ. ಎಸ್​ಪಿಪಿ ಪ್ರಸನ್ನ ಕುಮಾರ್​ ವಾದ ಮಾಡಿದ್ದಾರೆ.

ದರ್ಶನ್ ಅವರ ಪರವಾಗಿ ವಕೀಲ ಸಿ.ವಿ. ನಾಗೇಶ್ ಅವರು ವಾದ ಮಂಡಿಸಿದರು. ಮಧ್ಯಂತರ ಜಾಮೀನು ಅವಧಿ ವಿಸ್ತರಿಸಲು ಮನವಿ ಮಾಡಿದರು. ಈವರೆಗೂ ದರ್ಶನ್ ಯಾಕೆ ಸರ್ಜರಿ ಮಾಡಿಸಿಲ್ಲ ಎಂಬ ಪ್ರಶ್ನೆಗೆ ಈ ಮೊದಲು ನಡೆದ ವಿಚಾರಣೆಯಲ್ಲಿ ಸಿ.ವಿ. ನಾಗೇಶ್ ಅವರು ಕಾರಣ ನೀಡಿದ್ದರು. ನಟನಿಗೆ ರಕ್ತದೊತ್ತಡ ವ್ಯತ್ಯಾಸ ಆಗುತ್ತಿರುವುದರಿಂದ ಶಸ್ತ್ರ ಚಿಕಿತ್ಸೆ ಇನ್ನೂ ನಡೆಸಿಲ್ಲ ಎಂದು ಸಿ.ವಿ. ನಾಗೇಶ್ ಹೇಳಿದ್ದರು.

ಬಳ್ಳಾರಿ ಜೈಲಿನಲ್ಲಿ ಇದ್ದಾಗ ದರ್ಶನ್ ಅವರಿಗೆ ವಿಪರೀತ ಬೆನ್ನು ನೋವು ಕಾಣಿಸಿಕೊಂಡಿತ್ತು. ಅಲ್ಲಿಯೇ ಅವರಿಗೆ ಕೆಲವು ಪರೀಕ್ಷೆಗಳನ್ನು ಮಾಡಿದ ವೈದ್ಯರು ಶಸ್ತ್ರ ಚಿಕಿತ್ಸೆಗೆ ಸಲಹೆ ನೀಡಿದ್ದರು. ಎಲ್ಲ ವರದಿಗಳನ್ನು ಆಧರಿಸಿ ದರ್ಶನ್​ಗೆ 6 ವಾರಗಳ ಮಧ್ಯಂತರ ಜಾಮೀನು ನೀಡಲಾಗಿತ್ತು. ಅವರ ಜಾಮೀನು ಅವಧಿ ಡಿಸೆಂಬರ್​ 11ಕ್ಕೆ ಅಂತ್ಯವಾಗುವ ಹಿನ್ನೆಲೆಯಲ್ಲಿ ವಿಸ್ತರಣೆಗಾಗಿ ಮನವಿ ಮಾಡಲಾಗಿತ್ತು. ಈಗ ಜಾಮೀನು ಅವಧಿ ವಿಸ್ತರಣೆ ಆಗಿದ್ದು, ದರ್ಶನ್ ಸದ್ಯಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ.

ಡಿಸೆಂಬರ್​ 11ಕ್ಕೆ ದರ್ಶನ್ ಅವರ ಶಸ್ತ್ರ ಚಿಕಿತ್ಸೆಗೆ ದಿನಾಂಕ ನಿಗದಿ ಆಗಿದೆ. ಈ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದೆ. ಆದ್ದರಿಂದ ಅವರ ಜಾಮೀನು ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ರೆಗ್ಯುಲರ್​ ಬೇಲ್ ವಿಚಾರಣೆಯ ವಾದ-ಪ್ರತಿವಾದ ಮುಗಿದಿದೆ. ಆದೇಶವನ್ನು ಹೈಕೋರ್ಟ್​ ಕಾಯ್ದಿರಿಸಿದೆ. ಆದೇಶ ಬರುವ ತನಕ ದರ್ಶನ್ ಅವರ ಮಧ್ಯಂತರ ಜಾಮೀನು ಅವಧಿ ಮುಂದುವರಿಯಲಿದೆ

Leave a Comment

Leave a Reply

Your email address will not be published. Required fields are marked *

error: Content is protected !!