ಮಹೀಂದ್ರಾ-ಇಂಡಿಗೋ ಮಧ್ಯೆ ಜಿದ್ದಾಜಿದ್ದಿ; ಎಮ್&ಎಮ್ ವಿರುದ್ಧ ಪ್ರಕರಣ ದಾಖಲಿಸಿದ ಏರ್‌ಲೈನ್ಸ್
ನ್ಯೂಸ್ ಆ್ಯರೋ: ಬಿಇ 6ಇ ಬ್ರ್ಯಾಂಡ್ ಹೆಸರಿನ ಕುರಿತು ಎರಡು ಕಂಪನಿಗಳ ಮಧ್ಯೆ ವಿವಾದ ನಡೆಯುತ್ತಿದ್ದು, ಸದ್ಯ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಬಿಇ 6ಇ ಹೆಸರನ್ನು ಬಳಸಿದ್ದಕ್ಕೆ ಇಂಡಿಗೋ ಏರ್‌ಲೈನ್ಸ್ ಸಂಸ್ಥೆ ಸದ್ಯ ಮಹೀಂದ್ರಾ ಆ್ಯಂಡ್ ಮಹೀಂದ್ರಾ ವಿರುದ್ಧ ಪ್ರಕರಣ ದಾಖಲಿಸಿದೆ. ಈ ಹೆಸರು ಬಳಸುವಂತಿಲ್ಲ ಎಂದು ಎಚ್ಚರಿಕೆ ನೀಡಿದೆ. ಈ ಬಗ್ಗೆ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದೆ.
ಮಹೀಂದ್ರಾ ಇತ್ತೀಚೆಗೆ ಭಾರತದಲ್ಲಿ ಹೊಸ ಬಿಇ 6ಇ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಎಸ್ಯುವಿಯನ್ನು ಬಿಡುಗಡೆ ಮಾಡಿರುವುದು ಗೊತ್ತಿರುವ ಸಂಗತಿ. ಈ ಕಾರಿನ ಹೆಸರಿಗೆ ಸಂಬಂಧಿಸಿದಂತೆ ಇಂಡಿಗೋ ಏರ್‌ಲೈನ್ಸ್ ಮಹೀಂದ್ರಾ ವಿರುದ್ಧ ಪ್ರಕರಣ ದಾಖಲಿಸಿದೆ. ಇಂಡಿಗೋ ಏರ್‌ಲೈನ್ಸ್ ಮಾಲೀಕ ಇಂಟರ್ ಗ್ಲೋಬ್ ಏವಿಯೇಷನ್ ತನ್ನ ಹೊಸ ಇವಿ ಬ್ರ್ಯಾಂಡ್‌ನಲ್ಲಿ 6ಇ ಬಳಕೆಗೆ ಸಂಬಂಧಿಸಿದಂತೆ ವಾಹನ ತಯಾರಕರನ್ನು ನ್ಯಾಯಾಲಯಕ್ಕೆ ಕೊಂಡೊಯ್ದಿದೆ. ಅಷ್ಟೇ ಅಲ್ಲ, ಮಹೀಂದ್ರಾ ಕಂಪನಿ ಬಿಇ 6ಇ ಹೆಸರನ್ನು ಬಳಸುವಂತಿಲ್ಲ ಎಂದು ಹೇಳಿದೆ.
ಸದ್ಯ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ಈ ಹೆಸರಿನ ಬಗ್ಗೆ ಮಹೀಂದ್ರಾ ಪ್ರಮುಖ ನಿರ್ಣಯ ತೆಗೆದುಕೊಂಡಿದೆ. ನಾವು ನಮ್ಮ ಉತ್ಪನ್ನವನ್ನು ಮಾರುಕಟ್ಟೆಗೆ ಕೊಂಡೊಯ್ಯುವಾಗ ನಮ್ಮ ಗ್ರಾಹಕರಿಗೆ ಉತ್ತಮ ಅನುಭವ ನೀಡುವುದು ನಮ್ಮ ಮೊದಲ ಆದ್ಯತೆ. ಹೀಗಾಗಿ ನಮ್ಮ ದೃಷ್ಟಿಯಿಂದ ವಿಮುಖರಾಗಲು ನಾವು ಬಯಸುವುದಿಲ್ಲ ಎಂದು ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿ ತಿಳಿಸಿದೆ.
ಎರಡು ಬೃಹತ್ ಮತ್ತು ಭಾರತೀಯ ಬಹುರಾಷ್ಟ್ರೀಯ ಕಂಪನಿಗಳು ಅನಗತ್ಯ ಸಂಘರ್ಷದಲ್ಲಿ ತೊಡಗಿಸಿಕೊಳ್ಳುವುದು ಸೂಕ್ತವಲ್ಲ. ನಾವು ಪರಸ್ಪರರ ಬೆಳವಣಿಗೆ ಮತ್ತು ವಿಸ್ತರಣೆಯನ್ನು ಬೆಂಬಲಿಸಬೇಕು. ಆದ್ದರಿಂದ ಕಂಪನಿಯು ತನ್ನ ಉತ್ಪನ್ನವನ್ನು “ಬಿಇ6” ಎಂದು ಹೆಸರಿಸಲು ನಿರ್ಧರಿಸುತ್ತಿದೆ ಎಂದು ಮಹೀಂದ್ರಾ ಕಂಪನಿ ತಿಳಿಸಿದೆ.
ಆದ್ರೂ ಇಂಡಿಗೋದ ಹಕ್ಕು ಆಧಾರರಹಿತವಾಗಿದೆ ಎಂದು ನಾವು ನಂಬುತ್ತೇವೆ. ನಮ್ಮ ಗುರುತು ವಿಭಿನ್ನವಾಗಿದೆ. ಆದ್ದರಿಂದ ನಾವು ಇದನ್ನು ನ್ಯಾಯಾಲಯದಲ್ಲಿ ಬಲವಾಗಿ ವಿರೋಧಿಸುತ್ತೇವೆ ಮತ್ತು ಬಿಇ 6ಇ ಬ್ರ್ಯಾಂಡ್ ಹೆಸರಿಗೆ ನಮ್ಮ ಹಕ್ಕುಗಳನ್ನು ಕಾಯ್ದಿರಿಸುತ್ತೇವೆ ಎಂದು ಕಂಪನಿ ಹೇಳಿದೆ.
ಇಂಟರ್‌ಗ್ಲೋಬ್ ಬೇರೆ ಬೇರೆ ಉದ್ಯಮ ಮತ್ತು ವ್ಯವಹಾರದಲ್ಲಿ ಇಂಡಿಗೋ ಮಾರ್ಕ್ ಅನ್ನು ಬಳಸುವುದನ್ನು ಮುಂದುವರೆಸಿದೆ. ಆದ್ದರಿಂದ ಬಿಇ 6ಇಗೆ ಅವರ ಆಕ್ಷೇಪಣೆಯು ಅವರ ಸ್ವಂತ ಹಿಂದಿನ ನಡವಳಿಕೆಯೊಂದಿಗೆ ಅಸಮಂಜಸವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ ಎಂದು ಮಹೀಂದ್ರಾ ಹೇಳಿದೆ.
ಹೊಸ ಎಲೆಕ್ಟ್ರಿಕ್ ಎಸ್‌ಯುವಿಯ ಹೆಸರು ಬಿಇ 6 ಎಂದು ಬದಲಾಯಿಸಲಾಗಿದೆ ಎಂದು ಮಹೀಂದ್ರಾ ಮಾಹಿತಿ ನೀಡಿದೆ. ಆದರೂ ಸಹ ಮಹೀಂದ್ರಾ ಬಿಇ 6ಇ ಹೆಸರಿಗಾಗಿ ನ್ಯಾಯಾಲಯದಲ್ಲಿ ಪ್ರಕರಣವನ್ನು ಮುಂದುವರಿಸಲಿದೆ. ಹೊಸ ಮಹೀಂದ್ರಾ ಬಿಇ 6ನ ಆರಂಭಿಕ ಎಕ್ಸ್ ಶೋ ರೂಂ ಬೆಲೆ 18.90 ಲಕ್ಷ ರೂಪಾಯಿ. ಗ್ರಾಹಕರಿಗೆ ಈ ಕಾರಿನ ಡಿಲಿವೆರಿ ಮಾರ್ಚ್ 2025 ರಿಂದ ಪ್ರಾರಂಭವಾಗಲಿದೆ ಎಂದು ಕಂಪನಿ ಹೇಳಿದೆ.
Leave a Comment