ಅಡಿಕೆಯಿಂದ ಆರೋಗ್ಯಕ್ಕೆ ಹಾನಿ?; ಸತ್ಯಾನ್ವೇಷಣೆ ಅಧ್ಯಯನಕ್ಕೆ ಇಳಿದ ಕೇಂದ್ರ

arecanut
Spread the love

ನ್ಯೂಸ್ ಆ್ಯರೋ: ಅಡಿಕೆಯಿಂದ ಆರೋಗ್ಯಕ್ಕೆ ಹಾನಿ ಎನ್ನುವ ಸಾಕಷ್ಟು ಸುದ್ದಿಗಳು ಬರುತ್ತಿವೆ. ಕೆಲವು ಕಡೆ ಅಡಿಕೆಯಿಂದ ಆರೋಗ್ಯಕ್ಕೆ ಯಾವುದೇ ರೀತಿಯ ಸಮಸ್ಯೆ ಆಗೋದಿಲ್ಲ ಎನ್ನುವ ಮಾತುಗಳಿವೆ. ಅಡಿಕೆ ಮತ್ತು ಆರೋಗ್ಯದ ಕುರಿತಾಗಿ ಇರುವ ಜ್ಞಾನದ ಅಂತರವನ್ನು ಕಡಿಮೆ ಮಾಡುವ ಅಡಿಕೆ ಮತ್ತು ಆರೋಗ್ಯದ ವಿಚಾರವಾಗಿ ಸಾಕ್ಷ್ಯ ಆಧಾರಿತ ಅಧ್ಯಯನವನ್ನು ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಅಡಿಕೆಯಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಸೂಕ್ತವಾದ ಸಾಕ್ಷ್ಯವನ್ನು ಕಂಡುಹಿಡಿಯುವುದು ಈ ಅಧ್ಯಯನದ ಉದ್ದೇಶವಾಗಿದೆ ಎಂಧು ಹೇಳಿದೆ.

‘ಈ ಅಧ್ಯಯನವು ವೈದ್ಯಕೀಯ ಸಂಶೋಧನೆಯೊಂದಿಗೆ ವ್ಯವಹರಿಸುವ ಸುಮಾರು 16 ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಏಜೆನ್ಸಿಗಳನ್ನು ಒಟ್ಟುಗೂಡಿಸುತ್ತದೆ, ಇದರಲ್ಲಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS), ಕೌನ್ಸಿಲ್ ಫಾರ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR)-ಸೆಂಟರ್ ಫಾರ್ ಸೆಲ್ಯುಲಾರ್ ಮತ್ತು ಮಾಲಿಕ್ಯುಲರ್ ಬಯಾಲಜಿ (CCMB), ಭಾರತೀಯ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಮತ್ತು ಇತರ ಸಂಸ್ಥೆಗಳು ಇರಲಿವೆ. ಮಾನವನ ಆರೋ್ಯದ ಮೇಲೆ ಅಡಿಕೆಯ ಪರಿಣಾಮದ ಬಗ್ಗೆ ವಿವರವಾದ ಸಂಶೋಧನೆ ಹಾಗೂ ಅಧ್ಯಯನವನ್ನು ಈ ಸಂಸ್ಥೆಗಳು ನಡೆಸಲಿದೆ’ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಭಾಗೀರಥ್ ಚೌಧರಿ ಲೋಕಸಭೆಯಲ್ಲಿ ಲಿಖಿತವಾಗಿ ಮಾಹಿತಿ ನೀಡಿದ್ದಾರೆ.

ಇದೇ ವೇಳೆ ಅಡಿಕೆ ರೈತರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆ ಎಂದು ಸಚಿವರು ಹೇಳಿದ್ದಾರೆ. ಡಬ್ಲ್ಯುಎಚ್‌ಒ ಉಲ್ಲೇಖಿಸಿರುವ ಅಡಿಕೆಯ ಆರೋಗ್ಯದ ಪರಿಣಾಮಗಳ ಕುರಿತು ಕೆಲವು ಸಂಶೋಧನಾ ಪ್ರಬಂಧಗಳು ಹಲವು ಮಿತಿಗಳನ್ನು ಹೊಂದಿದೆ. ಇದೇ ಸಂಶೋಧನೆಗಳನ್ನು ಇಟ್ಟುಕೊಂಡು ಅಡಿಕೆ ಕೃಷಿಯಿಂದ ಹಾನಿ ಆಗುತ್ತದೆ ಎಂದು ಬಿಂಬಿಸುವ ವರದಿಗಳು ನಮ್ಮ ಗಮನಕ್ಕೆ ಬಂದಿವೆ. ಇದುವರೆಗೂ ನಡೆದ ಹಲವು ಅಧ್ಯಯನಗಳು ಪಾನ್ ಮಸಾಲಾ, ಗುಟ್ಕಾದಂತಹ ಮಿಶ್ರಣಗಳಿಂದ ಮಾನವನ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳನ್ನು ಚರ್ಚಿಸಿವೆ. ಆದರೆ ಅದರಲ್ಲಿ ಕೇವಲ ಅಡಿಕೆ ಇರುವುದಿಲ್ಲ ಇತರ ಪದಾರ್ಥಗಳು ಇರುತ್ತವೆ. ಆದ್ದರಿಂದ ಕೇವಲ ಅಡಿಕೆಗೆ ಸೀಮಿತವಾಗುವಂತೆ, ಅದು ಮಾನವನ ಆರೋಗ್ಯದ ಮೇಲೆ ಬೀರುವ ಪರಿಣಾಮದ ಕುರಿತು ಅಧ್ಯಯನ ನಡೆಸಲಾಗುತ್ತದೆ” ಎಂದು ಸಚಿವರು ಹೇಳಿದರು.

2023 ರ ನವೆಂಬರ್‌ನಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್)-ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್, ಕಾಸರಗೋಡಿನಲ್ಲಿ ಬಹುಸಾಂಸ್ಥಿಕ ಮಧ್ಯಸ್ಥಗಾರರಿಂದ ಲಭ್ಯವಿರುವ ದಾಖಲೆಗಳ ವಿಮರ್ಶೆಯನ್ನು ನಡೆಸಲಾಯಿತು. ಇದರಲ್ಲಿ ಅರೆಕೋಲಿನ್ ಕಡಿಮೆ ಪ್ರಮಾಣದಲ್ಲಿ ಗೆಡ್ಡೆಯ ಬೆಳವಣಿಗೆಯನ್ನು ತಡೆಯುತ್ತದೆ ಎಂದು ಕೆಲವು ಅಧ್ಯಯನಗಳು ಬಹಿರಂಗಪಡಿಸಿವೆ ಎಂದು ಅವರು ಹೇಳಿದರು.

ಕಾಸರಗೋಡು ಸಂಸದ ರಾಜಮೋಹನ್ ಉನ್ನಿಥಾನ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಡಿಕೆಯಲ್ಲಿ ಹಲವಾರು ಆಲ್ಕಲಾಯ್ಡ್‌ಗಳಿರುವುದರಿಂದ ಆಯುರ್ವೇದ ಮತ್ತು ಪಶುವೈದ್ಯಕೀಯ ಔಷಧಿಗಳಲ್ಲಿ ಬಳಕೆ ಇದೆ ಎಂದಿದ್ದಾರೆ. ಇತ್ತೀಚೆಗೆ ಸೆಂಟ್ರಲ್ ಅರೆಕಾನಟ್ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋಆಪರೇಟಿವ್ (ಕ್ಯಾಂಪ್ಕೊ) ಲಿಮಿಟೆಡ್ ಅಡಿಕೆಯನ್ನು ಕ್ಯಾನ್ಸರ್ ಕಾರಕ ಎಂದು ಡಬ್ಲ್ಯುಎಚ್‌ಒ ವರ್ಗೀಕರಿಸುವುದರ ವಿರುದ್ಧ ಮಧ್ಯಪ್ರವೇಶಿಸುವಂತೆ ಕೇಂದ್ರಕ್ಕೆ ಪತ್ರ ಬರೆದಿತ್ತು.

ಅಡಿಕೆ ಕೃಷಿಯ ಮೇಲೆ ತೇವಾಂಶದ ಪ್ರಭಾವದ ಕುರಿತು ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಪ್ರಶ್ನೆಗೆ ಉತ್ತರಿಸಿದ ಕೃಷಿ ರಾಜ್ಯ ಸಚಿವ ರಾಮನಾಥ್ ಠಾಕೂರ್, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಅಡಿಕೆಗಾಗಿ 7% ಗರಿಷ್ಠ ತೇವಾಂಶದ ಅಗತ್ಯವನ್ನು ಪರಿಶೀಲಿಸಲು ಯಾವುದೇ ಪರಿಣಾಮದ ಮೌಲ್ಯಮಾಪನವನ್ನು ನಡೆಸಿಲ್ಲ ಎಂದು ಹೇಳಿದರು.

Leave a Comment

Leave a Reply

Your email address will not be published. Required fields are marked *

error: Content is protected !!