ನಂದಿನಿ ದೋಸೆ ಹಿಟ್ಟು ನಿರ್ಧಾರ ಕೈಬಿಟ್ಟ ಕೆಎಂಎಫ್; ಇಲ್ಲಿದೆ ಮಹತ್ವದ ಕಾರಣ
ನ್ಯೂಸ್ ಆ್ಯರೋ: ‘ನಂದಿನಿ’ ಬ್ರ್ಯಾಂಡ್‌ನ ದೋಸೆ ಮತ್ತು ಇಡ್ಲಿ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡದಿರಲು ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾ ಮಂಡಳಿ(KMF) ನಿರ್ಧರಿಸಿದೆ.
ನಂದಿನಿ ಬ್ರ್ಯಾಂಡ್‌ನ ಮೌಲ್ಯ ವೃದ್ಧಿ ಹಾಗೂ ಮಾರುಕಟ್ಟೆ ವಿಸ್ತರಣೆ ನಿಟ್ಟಿನಲ್ಲಿ ಕೆಎಂಎಫ್, ನಂದಿನಿ ಹೆಸರಿನಲ್ಲಿ ಮಾರುಕಟ್ಟೆಗೆ ದೋಸೆ ಮತ್ತು ಇಡ್ಲಿ ಹಿಟ್ಟು ಪರಿಚಯಿಸಲು ಮುಂದಾಗಿತ್ತು. ಬೆಂಗಳೂರು ಮಹಾನಗರದ ಮಾರುಕಟ್ಟೆಯನ್ನು ಗಮನದಲ್ಲಿ ಇಟ್ಟುಕೊಂಡು ದೋಸೆ ಹಿಟ್ಟು ಮಾರಾಟಕ್ಕೆ ಸಿದ್ಧತೆ ನಡೆಸಿತ್ತು.
ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಅವರು ಈ ಕುರಿತು ಮಾತನಾಡಿದ್ದು, “ನಂದಿನಿ ಬ್ರಾಂಡ್ ನ ಪ್ರತಿ ಉತ್ಪನ್ನವೂ ಹೆಚ್ಚಿನ ಗುಣಮಟ್ಟ ಹೊಂದಿದ್ದು, ಗ್ರಾಹಕರ ನಂಬಿಕೆಯನ್ನು ಗಳಿಸಿದೆ. ಆದರೆ ದೋಸೆ ಹಿಟ್ಟಿನಂತೆ ತಾಜಾ ಉತ್ಪನ್ನಗಳು ತೊಂದರೆ ಉಂಟುಮಾಡಿದರೆ, ನಮ್ಮ ಬ್ರಾಂಡ್ ಗೆ ಹೊಡೆತ ಬೀರಬಹುದು. ಹೀಗಾಗಿ, ನಾವು ಈ ಯೋಜನೆಯಿಂದ ಹಿಂದೆ ಸರಿದಿದ್ದೇವೆ,” ಎಂದಿದ್ದಾರೆ.
ಅದೃಷ್ಟವಶಾತ್, ನಂದಿನಿ ಬ್ರಾಂಡ್ ತನ್ನ ಹಾಲು ಮತ್ತು ಹಾಲಿನ ಉತ್ಪನ್ನಗಳ ಮೂಲಕ ದೇಶಾದ್ಯಾಂತ ಹೆಸರು ಮಾಡುತ್ತಿದೆ. ದೆಹಲಿ, ಹರಿಯಾಣ ಸೇರಿದಂತೆ ಉತ್ತರ ಭಾರತದ ಭಾಗಗಳಲ್ಲಿ ಹಾಲು ಪೂರೈಕೆಯನ್ನು ಯಶಸ್ವಿಯಾಗಿ ವಿಸ್ತರಿಸುತ್ತಿರುವ ಕೆಎಂಎಫ್, ಪ್ರತಿದಿನ 2.50 ಲಕ್ಷ ಲೀಟರ್ ಹಾಲನ್ನು ಟ್ಯಾಂಕರ್ ಗಳ ಮೂಲಕ ಕಳುಹಿಸುತ್ತಿದೆ. ಈ ಹಾಲನ್ನು ಪ್ಯಾಕ್ ಮಾಡಿ ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ಮೂಲಕ, ತಮ್ಮ ವ್ಯಾಪಾರವನ್ನು ಮತ್ತಷ್ಟು ಬಲಪಡಿಸುತ್ತಿದೆ.
ರಾಜ್ಯದ ಹಾಲು ಸಂಗ್ರಹಣೆಯು ಕೋಟಿ ಲೀಟರ್ ಗಡಿ ದಾಟಿರುವಾಗ, ಇಂತಹ ಯೋಜನೆಗಳು ಗ್ರಾಮೀಣ ಹಾಲು ಉತ್ಪಾದಕರಿಗೂ ಅನುಕೂಲಕರವಾಗಿವೆ. ಇತ್ತ ಮಧ್ಯೆ, ಕೆಲವು ಸ್ಪರ್ಧಾತ್ಮಕ ಬ್ರಾಂಡ್‌ಗಳು ನಂದಿನಿ ಬ್ರಾಂಡ್‌ಗೆ ಅಡ್ಡಗಾಲು ಹಾಕಲು ಪ್ರಯತ್ನಿಸುತ್ತಿರುವುದರೂ, ನಂದಿನಿಯ ಗ್ರಾಹಕನಂಬಿಕೆ ಮತ್ತು ಬಲವಾದ ಮಾರುಕಟ್ಟೆ ತಂತ್ರಗಳು ಯಶಸ್ವಿಯತ್ತ ಮುನ್ನಡೆಸುತ್ತಿವೆ.
Leave a Comment