ಇತಿಹಾಸ ನಿರ್ಮಿಸಿದ ವಿಜಯಪುರ ಯುವತಿ; 18 ವರ್ಷಕ್ಕೆ ಪೈಲಟ್ ಆದ ಸಮೈರಾ
ನ್ಯೂಸ್ ಆ್ಯರೋ: ವಿಜಯಪುರ ಜಿಲ್ಲೆಯ 18 ವರ್ಷದ ಯುವತಿಯೊಬ್ಬಳು ದೇಶದ ಅತ್ಯಂತ ಕಿರಿಯ ಪೈಲಟ್ ಆಗಿ ಇತಿಹಾಸ ನಿರ್ಮಿಸಿದ್ದು, ರಾಜ್ಯದ ಹಿರಿಮೆಯನ್ನು ಹೆಚ್ಚಿಸಿದ್ದಾರೆ.
ಉದ್ಯಮಿ ಅಮೀನ್ ಹುಲ್ಲೂರ್ ಅವರ ಪುತ್ರಿ, 18 ವರ್ಷದ ಸಮೈರಾ ಹುಲ್ಲೂರು ಅವರು ಕಮರ್ಶಿಯಲ್ ಪೈಲಟ್ ಲೈಸನ್ಸ್ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದು, ಈ ಮೂಲಕ ವಿಜಯಪುರ ಜಿಲ್ಲೆ ಮಾತ್ರವಲ್ಲದೇ ರಾಜ್ಯದ ಕೀರ್ತಿಯ ಪತಾಕೆಯನ್ನು ಹಾರಿಸಿದ್ದಾರೆ.
ಸಮೀರಾ ಅವರ ವಾಯುಯಾನ ಪ್ರಯಾಣವು ವಿನೋದ್ ಯಾದವ್ ಏವಿಯೇಷನ್ ಅಕಾಡೆಮಿಯಲ್ಲಿ ಆರು ತಿಂಗಳ ತರಬೇತಿ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು. ಅಕಾಡೆಮಿ ಸಂಸ್ಥಾಪಕರಾದ ವಿನೋದ್ ಯಾದವ್ ಮತ್ತು ಕ್ಯಾಪ್ಟನ್ ತಪೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿ ಎಲ್ಲಾ ಸಿಪಿಎಲ್ ಪರೀಕ್ಷೆಗಳನ್ನು ಯಶಸ್ವಿಯಾಗಿ ಉತ್ತೀರ್ಣರಾದರು.
ತರಬೇತಿಯು ಕಠಿಣವಾಗಿತ್ತು. ಆದರೆ, ಬೋಧಕರ ನಿರಂತರ ಬೆಂಬಲ ಮತ್ತು ಮಾರ್ಗದರ್ಶನದಿಂದ ಅದು ಸುಲಭವಾಯಿತು. ನನ್ನ ಸಾಧನೆಯ ಎಲ್ಲಾ ಶ್ರೇಯಸ್ಸು ಕ್ಯಾಪ್ಟನ್ ತಪೇಶ್ ಕುಮಾರ್ ಮತ್ತು ವಿನೋದ್ ಯಾದವ್ ಅವರಿಗ ಸಲ್ಲುತ್ತದೆ ಎಂದು ಸಮೈರಾ ಹೇಳಿದ್ದಾರೆ.
“ನಾನು ದೇಶದ ಅತ್ಯಂತ ಕಿರಿಯ ಪೈಲಟ್ಗಳಲ್ಲಿ ಒಬ್ಬಳು ಎನ್ನುವ ದಾಖಲೆ ನಿರ್ಮಿಸಿದ್ದೇನೆ. ಸಿಪಿಎಲ್ ಹೊಂದಿರುವ ಕರ್ನಾಟಕದ ಅತ್ಯಂತ ಕಿರಿಯ ಪೈಲಟ್ ಆಗಿದ್ದೇನೆ. ಪೈಲಟ್ ಆಗಬೇಕು ಎನ್ನುವ ಕನಸಿತ್ತು. ಹಾಗಾಗಿ ದ್ವಿತೀಯ ಪಿಯುಸಿ ಮುಗಿದ ತಕ್ಷಣ ಪರೀಕ್ಷೆ ಬರೆಯಲು ದೆಹಲಿಗೆ ಹೋಗಿ, ಐದು ಪರೀಕ್ಷೆಗಳನ್ನು ಪಾಸ್ ಆಗಿದ್ದೆ. ಆದರೆ ಇನ್ನೊಂದು ಪರೀಕ್ಷೆಗೆ ನನಗೆ 18 ವರ್ಷ ಆಗಿರಬೇಕಿತ್ತು. ಆಗಿರದ ಕಾರಣ ನಾನು ಕಾರವಾರಕ್ಕೆ ಹೋಗಿ ಅಲ್ಲಿ ಟ್ರೈನಿಂಗ್ ಮುಗಿಸಿ, ಎಸ್ಪಿಎಲ್ ಗಳಿಸಿದೆ. 18 ವರ್ಷ ಆದ ಬಳಿಕ ಕೊನೆಯ ಪರೀಕ್ಷೆ ಬರೆದು, ಟ್ರೈನಿಂಗ್ ಮುಗಿಸಿದೆ. ಅಪ್ಪ ಅಮ್ಮ ನನ್ನ ಸಾಧನೆಯಿಂದ ತುಂಬಾ ಖುಷಿಯಾಗಿದ್ದಾರೆ. ಸಣ್ಣ ವಯಸ್ಸಿನಿಂದಲೇ ನನಗೆ ಅಪ್ಪ ಅಮ್ಮ ಎಲ್ಲದಕ್ಕೂ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.” ಎಂದು ಖುಷಿ ಹಂಚಿಕೊಂಡರು.
Leave a Comment