ಭಾರತ ಮತ್ತೊಂದು ಐತಿಹಾಸಿಕ ಸಾಧನೆ; ಐರನ್ ಡೋಂ ಭೇದಿಸಬಲ್ಲ ಕ್ಷಿಪಣಿ ಪ್ರಯೋಗ ಯಶಸ್ವಿ

hypersonic missile
Spread the love

ನ್ಯೂಸ್ ಆ್ಯರೋ: ಇಸ್ರೇಲ್‌ನ ಅತ್ಯಂತ ಬಲಿಷ್ಠ ‘ಐರನ್‌ಡೋಂ’ ಸೇರಿ ವಿವಿಧ ದೇಶಗಳ ವಾಯುರಕ್ಷಣಾ ವ್ಯವಸ್ಥೆಯನ್ನು ಭೇದಿಸುವ ಸಾಮರ್ಥ್ಯ ಹೊಂದಿರುವ ಹೈಪರ್‌ಸಾನಿಕ್‌ ಕ್ಷಿಪಣಿ ಪರೀಕ್ಷೆಯನ್ನು ಭಾರತ ಭಾನುವಾರ ಯಶಸ್ವಿಯಾಗಿ ನಡೆಸಿದೆ. ಈ ಮೂಲಕ ಇಂಥ ಕ್ಷಿಪಣಿ ಹೊಂದಿರುವ ವಿಶ್ವದ ಕೆಲವೇ ಕೆಲವು ದೇಶಗಳ ಸಾಲಿಗೆ ಭಾರತ ಸೇರಿದೆ.

ಇದರ ಯಶಸ್ವಿ ಉಡ್ಡಯನದ ಬೆನ್ನಲ್ಲೇ, ‘ಇದೊಂದು ಐತಿಹಾಸಿಕ ಸಾಧನೆ’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಬಣ್ಣಿಸಿದ್ದಾರೆ.

ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿರುವ ಈ ಕ್ಷಿಪಣಿಯನ್ನು ಭಾನುವಾರ ಒಡಿಶಾದ ಕರಾವಳಿ ತೀರದಲ್ಲಿ ಯಶಸ್ವಿಯಾಗಿ ಪ್ರಯೋಗಿಸಲಾಯಿತು. ಈ ಕ್ಷಿಪಣಿ 1500 ಕಿ.ಮೀ.ಗಿಂತಲೂ ಹೆಚ್ಚಿನ ದೂರದವರೆಗೆ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಶಕ್ತಿ ಹೊಂದಿದೆ.

ಸಾಮಾನ್ಯವಾಗಿ ಹೈಪರ್‌ಸಾನಿಕ್‌ ಕ್ಷಿಪಣಿಗಳು ಸಾಂಪ್ರದಾಯಿಕ ಮತ್ತು ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತು ಶಬ್ದಕ್ಕಿಂತ 5 ಪಟ್ಟು ವೇಗದಲ್ಲಿ ಅಂದರೆ ಗಂಟೆಗೆ 6000 ಕಿ.ಮೀ. ಗಿಂತಲೂ ಹೆಚ್ಚಿನ ವೇಗದಲ್ಲಿ ಸಾಗಬಲ್ಲ ಸಾಮರ್ಥ್ಯ ಹೊಂದಿರುತ್ತದೆ. ಆದರೆ ಕೆಲವು ಹೈಪರ್‌ಸಾನಿಕ್‌ ಕ್ಷಿಪಣಿಗಳು ಶಬ್ದಕ್ಕಿಂತ 15 ಪಟ್ಟು ಹೆಚ್ಚು ವೇಗದಲ್ಲೂ ಸಾಗಬಲ್ಲದಾಗಿರುತ್ತವೆ.

ಕ್ಷಿಪಣಿಯನ್ನು ಉಡ್ಡಯನದ ಬಳಿಕ ವಿವಿಧ ಹಂತದಲ್ಲಿ ವಿವಿಧ ಕೇಂದ್ರಗಳ ಮೂಲಕ ನಿಗಾ ವಹಿಸಲಾಗಿದ್ದು ಈ ವೇಳೆ ಕ್ಷಿಪಣಿ ತನ್ನ ಎಲ್ಲಾ ಗುರಿಗಳನ್ನೂ ಮುಟ್ಟಿದೆ ಎಂದು ಡಿಆರ್‌ಡಿಒ ಹೇಳಿದೆ. ಸದ್ಯ ರಷ್ಯಾ ಮತ್ತು ಚೀನಾ ಹೈಪರ್‌ಸಾನಿಕ್ ಕ್ಷಿಪಣಿಗಳ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದರೆ, ಅಮೆರಿಕ ವಿವಿಧ ಮಾದರಿಯ ಹೈಪರ್‌ಸಾನಿಕ್‌ ಕ್ಷಿಪಣಿ ಅಭಿವೃದ್ಧಿಪಡಿಸುತ್ತಿದೆ. ಉಳಿದಂತೆ ಫ್ರಾನ್ಸ್‌, ಜರ್ಮನಿ, ಆಸ್ಟ್ರೇಲಿಯ, ಜಪಾನ್‌, ಇರಾನ್‌, ಇಸ್ರೇಲ್‌ ಮೊದಲಾದ ದೇಶಗಳು ಹೈಪರ್‌ಸಾನಿಕ್‌ ಅಭಿವೃದ್ಧಿಗೆ ಯೋಜನೆ ರೂಪಿಸಿವೆ.

Leave a Comment

Leave a Reply

Your email address will not be published. Required fields are marked *

error: Content is protected !!