ವೈದ್ಯರಿಗೆ 7 ಬಾರಿ ಇರಿದ ಪೇಷಂಟ್ ಮಗ; ಕೊನೆಗೆ ಪೊಲೀಸರ ಅತಿಥಿಯಾದ ಕಾರಣ ಹೀಗಿದೆ
ನ್ಯೂಸ್ ಆ್ಯರೋ: ತಮಿಳುನಾಡಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಗೆ ರೋಗಿಯ ಮಗ ಚಾಕುವಿನಿಂದ ಏಳು ಬಾರಿ ಇರಿದಿರುವ ಘಟನೆ ಬುಧವಾರ (ನ.13) ನಡೆದಿದೆ. ವೈದ್ಯರಾದ ಬಾಲಾಜಿ ಜಗನಾಥನ್ ಅವರು ಪ್ರಸ್ತುತ ಹಲ್ಲೆಯಿಂದ ಚೇತರಿಸಿಕೊಳ್ಳಲು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವರ ಕುತ್ತಿಗೆ, ಕಿವಿ, ಹಣೆ, ಬೆನ್ನು ಮತ್ತು ಹೊಟ್ಟೆಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿಘ್ನೇಶ್ ಚೆನ್ನೈ ನಿವಾಸಿಯಾಗಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಕಿಮೋಥೆರಪಿಗೆ ಒಳಗಾಗಿದ್ದ ತನ್ನ ತಾಯಿಗೆ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ ಎಂಬ ಕೋಪದಿಂದ ಡಾ.ಬಾಲಾಜಿ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ.
ಡಾ.ಬಾಲಾಜಿ ಕಾರ್ಯನಿರ್ವಹಿಸುತ್ತಿದ್ದ ಸರ್ಕಾರಿ ಆಸ್ಪತ್ರೆಯ ಕ್ಯಾನ್ಸರ್ ವಿಭಾಗದಲ್ಲಿ ಈ ಘಟನೆ ನಡೆದಿದೆ. ದಾಳಿಯ ಬಳಿಕ ವಿಘ್ನೇಶ್ ಪರಾರಿಯಾಗಲು ಯತ್ನಿಸಿದ್ದು ಸ್ಥಳದಲ್ಲಿದ್ದವರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಘಟನೆ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪ್ರತಿಕ್ರಿಯಿಸಿದ್ದು, ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ನಮ್ಮ ಸರ್ಕಾರಿ ವೈದ್ಯರ ನಿಸ್ವಾರ್ಥ ಕೆಲಸ ಅಪಾರವಾಗಿದೆ.
ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಕರ್ತವ್ಯ. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ. ಈ ವಿಚಾರದಲ್ಲಿ ಆದಷ್ಟು ಬೇಗ ಕ್ರಮಕೈಗೊಳ್ಳುವುದಾಗಿ ರಾಜ್ಯ ಆರೋಗ್ಯ ಸಚಿವ ಮಾ.ಸುಬ್ರಮಣ್ಯಂ ಕೂಡ ಭರವಸೆ ನೀಡಿದ್ದಾರೆ.
Leave a Comment