ಹಾಲಿನಲ್ಲಿ ಸ್ನಾನ ಮಾಡಿ, ಅದೇ ಹಾಲು ಮಾರಾಟ; ಈ ವಿಡಿಯೋದಲ್ಲಿರುವ ಅಸಲಿಯತ್ತೇನು ?
ನ್ಯೂಸ್ ಆ್ಯರೋ: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ, ಒಬ್ಬ ವ್ಯಕ್ತಿಯು ಹಾಲು ತುಂಬಿದ ಟಬ್ನಲ್ಲಿ ಸ್ನಾನ ಮಾಡುತ್ತಿರುವುದನ್ನು ಕಾಣಬಹುದು. ಕೇರಳದ ಡೈರಿ ಪ್ಲಾಂಟ್ನಲ್ಲಿ ಮುಸ್ಲಿಂ ಉದ್ಯೋಗಿಯೊಬ್ಬರು ಹಾಲು ತುಂಬಿದ ಟಬ್ನಲ್ಲಿ ಸ್ನಾನ ಮಾಡುತ್ತಿದ್ದಾರೆ ಮತ್ತು ಇದೇ ಹಾಲನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.
ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡ, ‘‘ಕೇರಳದ ಹಾಲಿನ ಡೈರಿ (ಕಾರ್ಖಾನೆ) ಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಹಾಲಿನ ಟಬ್ನಲ್ಲಿ ಸ್ನಾನ ಮಾಡುತ್ತಿರುವ ದೃಶ್ಯವನ್ನು ನೋಡಿ ಮತ್ತು ಅದೇ ಹಾಲನ್ನು ಮಾರುಕಟ್ಟೆಯಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡಲಾಗುತ್ತಿದೆ. ಇದು ನಿಜವೋ ಅಲ್ಲವೋ ಎಂಬುದು ಮುಖ್ಯವೇ?’’ ಎಂದು ಬರೆದುಕೊಂಡಿದ್ದಾರೆ.
ಈ ಸುದ್ದಿಯನ್ನು ʼಫ್ಯಾಕ್ಟ್ ಚೆಕ್ʼ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಅಸಲಿಗೆ ಈ ವಿಡಿಯೋ ಕೇರಳ ಅಥವಾ ಭಾರತದ್ದೇ ಅಲ್ಲ. ಈ ಘಟನೆ ನಡೆದಿರುವುದು 2020 ರಲ್ಲಿ ಟರ್ಕಿಯಲ್ಲಾಗಿದೆ.
ವರದಿಗಳ ಪ್ರಕಾರ, ಈ ವೀಡಿಯೊವು ಮಧ್ಯ ಅನಾಟೋಲಿಯನ್ ಪ್ರಾಂತ್ಯದ ಕೋನಿಯಲ್ಲಿರುವ ಡೈರಿ ಪ್ಲಾಂಟ್ನದ್ದಾಗಿದೆ. ಹಾಲಿನಲ್ಲಿ ಸ್ನಾನ ಮಾಡುತ್ತಿದ್ದ ವ್ಯಕ್ತಿಯನ್ನು ಎಮ್ರೆ ಸಾಯರ್ ಎಂದು ಗುರುತಿಸಲಾಗಿದೆ. ವಿಡಿಯೋ ವೈರಲ್ ಆದ ನಂತರ ಆರೋಪಿಯನ್ನು ಬಂಧಿಸಲಾಗಿದೆ. ವಿಡಿಯೋ ಕಾಣಿಸಿಕೊಂಡ ನಂತರ ಡೈರಿ ಪ್ಲಾಂಟ್ ಅನ್ನು ಸಹ ಮುಚ್ಚಲಾಗಿದೆ. ಆದರೆ, ಈ ವ್ಯಕ್ತಿಯು ಹಾಲಿನಲ್ಲಿ ಸ್ನಾನ ಮಾಡಲಿಲ್ಲ, ನೀರು ಮತ್ತು ಶುಚಿಗೊಳಿಸುವ ದ್ರವದ ಮಿಶ್ರಣದಲ್ಲಿ ಆತ ಇದ್ದ ಎಂದು ಮಾಲೀಕರು ಹೇಳಿದ್ದಾರೆ ಎಂದು ಮಾಧ್ಯಮ ವರದಿಗಳಲ್ಲಿ ಉಲ್ಲೇಖಿಸಲಾಗಿದೆ.
Leave a Comment