‘ಟಾಕ್ಸಿಕ್’ ಶೂಟಿಂಗ್ ಗೆ ಮರಗಳ ಮಾರಣಹೋಮ; ಪರಿಶೀಲನೆಗೆ ಬಿಬಿಎಂಪಿ ಅರಣ್ಯ ವಿಭಾಗದಿಂದ ಕಮಿಟಿ ರಚನೆ
ನ್ಯೂಸ್ ಆ್ಯರೋ: ‘ಟಾಕ್ಸಿಕ್’ ಚಿತ್ರದ ಶೂಟಿಂಗ್ ಗಾಗಿ ಮರಗಳ ದಹನ ಆರೋಪಕ್ಕೆ ಸಂಬಂಧಿಸಿದಂತೆ ಪರಿಶೀಲನೆಗೆ ಬಿಬಿಎಂಪಿ ಅರಣ್ಯ ವಿಭಾಗದಿಂದ ಕಮಿಟಿ ರಚನೆ ಮಾಡಲಾಗಿದೆ. ಬಿಬಿಎಂಪಿ ಅರಣ್ಯ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಕಮಿಟಿ ರಚಿಸಲಾಗಿದ್ದು, ಈ ಕಮಿಟಿ ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಶೂಟಿಂಗ್ ಗಾಗಿ ನೂರಾರು ಮರಗಳ ಮಾರಣಹೋಮ ನಡೆಸಿರುವ ಆರೋಪ ಕೇಳಿಬಂದಿದೆ.
ಬೆಂಗಳೂರಿನ ಹೆಚ್.ಎಂ.ಟಿ ಅರಣ್ಯ ಪ್ರದೇಶದಲ್ಲಿ ‘ಟಾಕ್ಸಿಕ್’ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಭಾರಿ ಸೆಟ್ ನಿರ್ಮಾಣ ಮಾಡಲಾಗಿದೆ. ಶೂಟಿಂಗ್ ಸೆಟ್ ನಿರ್ಮಾಣಕ್ಕಾಗಿ ಅರಣ್ಯ ಪ್ರದೇಶದಲ್ಲಿರುವ ನೂರಾರು ಮರಗಳನ್ನು ಕಡಿಯಲಾಗಿರುವುದು ಸ್ಯಾಟಲೈಟ್ ಇಮೇಜ್ ಪರಿಶೀಲನೆ ವೇಳೆ ಪತ್ತೆಯಾಗಿದೆ.
ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಮರ ಕಡಿದವರ ವಿರುದ್ಧ ಅರಣ್ಯ ಅಪರಾಧ ಅಡಿ ಕೇಸ್ ದಾಖಲಿಸಿ, ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದಾರೆ. ‘ಟಾಕ್ಸಿಕ್ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ನಾನು ಖುದ್ದು ಹೋಗಿ ನೋಡಿದ್ದೇನೆ. ಅಲ್ಲಿನ ಸಂಪೂರ್ಣ ಚಿತ್ರಣ ಬದಲಾಗಿದೆ. ಏರಿಯಲ್ ಸರ್ವೇಯಲ್ಲಿ ಕಾಣಿಸಿದೆ. ಇದು ಬಿಬಿಎಂಪಿ ವ್ಯಾಪ್ತಿಗೆ ಬರಲಿದೆ. ಕಾನೂನು ಕ್ರಮಕ್ಕೆ ಪಾಲಿಕೆಗೂ ಪತ್ರ ಬರೆದಿದ್ದೇನೆ. ಕಾಯ್ದೆ 24ರಡಿ ಕೇಸ್ ದಾಖಲಿಸಲು ಅವಕಾಶ ಇದೆ. ಈಗಿನ ಪರಿಸ್ಥಿತಿ ತರಿಸಿಕೊಂಡಿದ್ದೇವೆ.
ಹಿಂದಿನ ಜಾಗದ ಬಗ್ಗೆಯೂ ಮಾಹಿತಿ ಪಡೆದಿದ್ದೇವೆ. ಜಾಗ ಹೆಚ್ಎಂಟಿ ವಶದಲ್ಲಿ ಇಲ್ಲ. ‘ಪ್ರಾಥಮಿಕ ಹಂತದಲ್ಲಿ ಮಾಹಿತಿ ಕೊಟ್ಟಿದ್ದೇವೆ. ಒಳಗೊಳಗೆ ಏನಿದೆ ಅಂತಾ ತನಿಖೆ ಆಗಬೇಕು. ಕ್ರಮಕ್ಕೆ ಪತ್ರ ಬರೆದಿದ್ದೇನೆ, ತನಿಖೆ ಆಗಲಿ. ಜಾಗದಲ್ಲಿ ಸಣ್ಣ ವಿಲೇಜ್ ಥರ ಸೆಟ್ ಹಾಕಿದ್ದಾರೆ. ಅರಣ್ಯ ಸಂಕ್ಷರಣೆ ಮಾಡೋದು ನನ್ನ ಕರ್ತವ್ಯ. ಅದರಲ್ಲಿ ಯಾವುದೇ ರೀತಿ ರಾಜಿ ಇಲ್ಲ. ಎಂದಿದ್ದಾರೆ ಈಶ್ವರ ಖಂಡ್ರೆ.
Leave a Comment