ಸೂಪರ್ ಪವರ್ ಇದೆ ಎಂದು ಮಹಡಿಯಿಂದ ಜಿಗಿದ ಹುಡುಗ; ಆತನ ಯಡವಟ್ಟಿನಿಂದ ಆಗಿದ್ದೇ ಬೇರೆ !
ನ್ಯೂಸ್ ಆ್ಯರೋ: ಈಗಿನ ಬಹುತೇಕ ಮಕ್ಕಳು ಭ್ರಮೆಯಲ್ಲಿ ಜೀವನ ನಡೆಸ್ತಿದ್ದಾರೆ. ಟಿವಿ, ಮೊಬೈಲ್, ಸೋಶಿಯಲ್ ಮೀಡಿಯಾ ಪ್ರಭಾವದಿಂದಾಗಿ ಅವರಿಗೆ ವಾಸ್ತವ ಹಾಗೂ ಭ್ರಮೆಯ ವ್ಯತ್ಯಾಸ ತಿಳಿಯುತ್ತಿಲ್ಲ. ಹೌದು ಇಲ್ಲೊಬ್ಬ 19 ವರ್ಷ ತುಂಬಿರುವ, ಬಿ.ಟೆಕ್ ಮಾಡ್ತಿರುವ ಹದಿಹರೆಯದ ಹುಡುಗ ಕೂಡ ಭ್ರಮಾಲೋಕದಲ್ಲಿರುವುದು ಆತಂಕ ಹುಟ್ಟಿಸಿದೆ. ಎಐ ಕಲಿಯುತ್ತಿರುವ ಹುಡುಗ ತನಗೆ ಸೂಪರ್ ಪವರ್ ಇದೆ ಎಂದು ಬಲವಾಗಿ ನಂಬಿದ್ದಾನೆ. ಬರೀ ನಂಬಿದ್ದು ಮಾತ್ರವಲ್ಲ ಅದನ್ನು ಪ್ರಯೋಗಕ್ಕೆ ತಂದಿದ್ದಾನೆ. ಕೊನೆಯಲ್ಲಿ ನಾಲ್ಕನೇ ಮಹಡಿಯಿಂದ ಜಿಗಿದು ಯಡವಟ್ಟು ಮಾಡ್ಕೊಂಡಿದ್ದಾನೆ.
ಘಟನೆ ಕೊಯಮತ್ತೂರು ಜಿಲ್ಲೆಯ ಮಲುಮಿಚಂಪಟ್ಟಿ ಸಮೀಪದ ಮೈಲಾರಿಪಾಳ್ಯದಲ್ಲಿರುವ ಕರ್ಪಗಂ ಎಂಜಿನಿಯರಿಂಗ್ ಕಾಲೇಜಿನ ಬಳಿ ನಡೆದಿದೆ. ಬಿ.ಟೆಕ್ ವಿದ್ಯಾರ್ಥಿ ಸೋಮವಾರ ಸಂಜೆ ಹಾಸ್ಟೆಲ್ ಕಟ್ಟಡದಿಂದ ಜಿಗಿದಿದ್ದಾನೆ. ಕಾಲು, ಕೈ ಮುರಿದಿದ್ದು, ತಲೆಗೆ ಗಂಭೀರ ಗಾಯಗಳಾಗಿವೆ. ವಿದ್ಯಾರ್ಥಿ ಪ್ರಭು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಭು ತನ್ನಲ್ಲಿ ಅಲೌಕಿಕ ಶಕ್ತಿ ಇದೆ ಎಂದು ನಂಬಿದ್ದ.
ಯಾವುದೇ ಕಟ್ಟಡದಿಂದ ಜಿಗಿದ್ರೂ ನನಗೆ ಏನೂ ಆಗಲು ಸಾಧ್ಯವಿಲ್ಲ. ನಾನು ಆರಾಮವಾಗಿ ಜಿಗಿಯಬಲ್ಲೆ ಅಂದ್ಕೊಂಡಿದ್ದ. ನನ್ನ ಬಳಿ ಅಲೌಕಿಕ ಶಕ್ತಿಗಳಿವೆ ಎಂದು ಪ್ರಭು ತನ್ನ ರೂಮ್ಮೇಟ್ಗಳು ಮತ್ತು ಸ್ನೇಹಿತರಿಗೆ ಆಗಾಗ ಹೇಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಭು, ಈರೋಡ್ ಜಿಲ್ಲೆಯ ಪೆರುಂದುರೈ ಸಮೀಪದ ಮೆಕ್ಕೂರ್ ಗ್ರಾಮದ ನಿವಾಸಿ. ಪ್ರಭು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡೇಟಾ ಸೈನ್ಸ್ ಮೂರನೇ ವರ್ಷದ ವಿದ್ಯಾರ್ಥಿ. ಕಾಲೇಜಿನ ಹಾಸ್ಟೆಲ್ನಲ್ಲಿ ಆತ ವಾಸವಿದ್ದ. ಕೆಲವು ದಿನಗಳ ಹಿಂದೆ ತನ್ನ ಸ್ನೇಹಿತರು ಮತ್ತು ರೂಮ್ಮೇಟ್ಗಳಿಗೆ ಯಾರೋ ನನಗೆ ಮಾಟ ಮಾಡಿಸಿದ್ದಾರೆ ಎಂದಿದ್ದನಂತೆ. ಕಳೆದ ವಾರ ತಾನು ಮಾಟಮಂತ್ರಕ್ಕೆ ಪ್ರಭಾವಿತನಾಗಿದ್ದೇನೆ ಎಂದು ಪ್ರಭು ಹೇಳಿದ್ದನಂತೆ. ಸೋಮವಾರ ಸಂಜೆ 6.30ರ ಸುಮಾರಿಗೆ ವಿದ್ಯಾರ್ಥಿಗಳು ಹಾಸ್ಟೆಲ್ನ ವರಾಂಡದಲ್ಲಿ ಮಾತನಾಡುತ್ತ ನಿಂತಿದ್ದರು.
ಈ ಸಮಯದಲ್ಲಿ ನಾಲ್ಕನೇ ಮಹಡಿಯಿಂದ ಪ್ರಭು ಜಿಗಿದಿದ್ದಾನೆ. ನೆಲಕ್ಕೆ ಬಿದ್ದ ಅವನ ಕೈ, ಕಾಲು ಮುರಿದಿದೆ. ತಲೆಗೆ ಗಾಯಗಳಾಗಿವೆ. ತಕ್ಷಣ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳು, ನಗರದ ಹೊರವಲಯದಲ್ಲಿರುವ ಓತಕ್ಕಳಮಂಡಪದಲ್ಲಿರುವ ಕರ್ಪಗಂ ಆಸ್ಪತ್ರೆಗೆ ಸಾಗಿಸಿದ್ದಾರೆ. ಇಲ್ಲಿಂದ ಅವನನ್ನು ಕೊಯಮತ್ತೂರಿನ ಗಂಗಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸದ್ಯ ಪ್ರಭುಗೆ ಚಿಕಿತ್ಸೆ ನಡೆಯುತ್ತಿದ್ದು, ಆತನ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
Leave a Comment