ದೀಪಾವಳಿ ಹಬ್ಬ ಸಮೀಪಿಸುತ್ತಿರುವಾಗಲೇ ಶಾಕಿಂಗ್ ಸುದ್ದಿ; ಈ ಬಾರಿ ಪಟಾಕಿ ತಯಾರಿಕೆ, ಮಾರಾಟ ಬ್ಯಾನ್
ನ್ಯೂಸ್ ಆ್ಯರೋ: ಚಳಿಗಾಲ ಸಮೀಪಿಸುತ್ತಿದ್ದಂತೆ ಮಾಲಿನ್ಯದ ಮಟ್ಟ ಹೆಚ್ಚಾಗುವ ನಿರೀಕ್ಷೆಯಲ್ಲಿ ದೆಹಲಿ ಸರ್ಕಾರ ಸೋಮವಾರ ನಗರದಾದ್ಯಂತ ಪಟಾಕಿಗಳ ತಯಾರಿಕೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆಯನ್ನು ಕೂಡಲೇ ಜಾರಿಗೆ ಬರುವಂತೆ ನಿರ್ಬಂಧಿಸಿದೆ.
ಇದು ಜನವರಿ 1ರವರೆಗೂ ಜಾರಿಯಲ್ಲಿರುತ್ತದೆ. ಈ ಘೋಷಣೆ ಮಾಡಿದ ದೆಹಲಿ ಪರಿಸರ ಸಚಿವ ಗೋಪಾಲ್ ರೈ, ರಾಷ್ಟ್ರ ರಾಜಧಾನಿಯನ್ನು ವಾಯು ಮಾಲಿನ್ಯ ಮುಕ್ತ ನಗರವನ್ನಾಗಿಸಲು ಸರ್ಕಾರದ ಪ್ರಯತ್ನಗಳನ್ನು ಬೆಂಬಲಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರೈ, ಚಳಿಗಾಲದಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಹಿನ್ನೆಲೆಯಲ್ಲಿ ಇಂದಿನಿಂದ ಜನವರಿ 1 ರವರೆಗೆ ಪಟಾಕಿಗಳ ತಯಾರಿಕೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆಯ ಮೇಲೆ ನಿಷೇಧ ಹೇರಲಾಗಿದೆ. ಇದರ ಬಗ್ಗೆ ಸರ್ಕಾರ ಸೂಚನೆಗಳನ್ನು ನೀಡಿದೆ. ಎಲ್ಲಾ ದೆಹಲಿ ಜನರಲ್ಲಿ ಸಹಕಾರವನ್ನು ಕೋರುತ್ತೇವೆ. ನಿಷೇಧ ಆದೇಶ ಪರಿಣಾಮಕಾರಿಯಾಗಿ ಅನುಷ್ಠಾನದ ಖಾತ್ರಿಗಾಗಿ ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ಸೂಚನೆಗಳನ್ನು ಬಿಡುಗಡೆ ಮಾಡಿದೆ ಎಂದು ತಿಳಿಸಿದ್ದಾರೆ.
ಆನ್ಲೈನ್ನಲ್ಲಿ ಮಾರಾಟವಾಗುವ ಪಟಾಕಿಗಳು ಸೇರಿದಂತೆ ಎಲ್ಲಾ ರೀತಿಯ ಪಟಾಕಿಗಳಿಗೆ ನಿಷೇಧ ಅನ್ವಯಿಸುತ್ತದೆ. ದೆಹಲಿ ಪೋಲೀಸರು ನಿಷೇಧ ಜಾರಿ ಕಾರ್ಯ ನಿರ್ವಹಿಸಲಿದ್ದು, ದೈನಂದಿನ ಕ್ರಿಯೆಯ ವರದಿಗಳನ್ನು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಗೆ ಸಲ್ಲಿಸಬೇಕಾಗುತ್ತದೆ. ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
Leave a Comment