ಸಚಿವ ಪ್ರಿಯಾಂಕ್ ಖರ್ಗೆ ಜೊತೆ ಮಾತುಕತೆ ಸಕ್ಸಸ್: ಗ್ರಾಮ ಪಂಚಾಯತಿ ನೌಕರರ ಮುಷ್ಕರ ವಾಪಾಸ್
ನ್ಯೂಸ್ ಆ್ಯರೋ: ಕಳೆದ ಆರು ದಿನಗಳಿಂದ ರಾಜ್ಯದಾದ್ಯಂತ ಗ್ರಾಮ ಪಂಚಾಯತಿಗಳ ನೌಕಕರು ಹೂಡಿದ್ದ ಮುಷ್ಕರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ತೆಗೆದುಕೊಂಡ ನಿರ್ಧಾರಗಳಿಂದ ಸುಖಾಂತ್ಯವಾಗಿದೆ.
ಹೀಗಾಗಿ ನಾಳೆಯಿಂದ ಎಂದಿನಂತೆ ಕಚೇರಿ ಕಾರ್ಯಗಳಲ್ಲಿ ನಿರತರಾಗುವುದಾಗಿ ನೌಕರ ಸಂಘದ ಪ್ರತಿನಿಧಿಗಳು ಘೋಷಿಸಿದರು.
ನೌಕರರ ಮಹಾ ಒಕ್ಕೂಟ ಹಾಗೂ ಗ್ರಾಮ ಪಂಚಾಯತ್ ಸದಸ್ಯರುಗಳ ಸುಮಾರು 300ಕ್ಕೂ ಹೆಚ್ಚು ಪ್ರತಿನಿಧಿಗಳು ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ತಮ್ಮ ಬೇಢೀಕೆಗಳನ್ನು ಸಚಿವರ ಮುಂದಿರಿಸಿದರು, ಸುಮಾರು 75ಕ್ಕೂ ಹೆಚ್ಚು ಬೇಡಿಕೆಗಳನ್ನು ಮೂರು ಗಂಟೆಗಳ ಕಾಲ ಆಲಿಸಿದ ಸಚಿವರು ಕಾನೂನಿನ ಚೌಕಟ್ಟಿನಲ್ಲಿ ಸಾಧ್ಯವಾಗಬಹುದಾದ ಎಲ್ಲ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಆದ್ಯತೆಯ ಮೇಲೆ ಈಡೇರಿಸುವುದಾಗಿ ತಿಳಿಸಿದರು.
ಇನ್ನು ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ತಮ್ಮ ಹಿತಾಸಕ್ತಿಗಳಿಗಾಗಿ ಹೋರಾಟ ಮಾಡುವುದು ಎಷ್ಟು ಮುಖ್ಯವೋ, ಸಾರ್ವಜನಿಕ ಸೇವೆಯ ಮೂಲಕ ಗ್ರಾಮೀಣ ಜನರ ಹಿತಾಸಕ್ತಿಗಳನ್ನು ಕಾಪಾಡಲು ಅಷ್ಟೇ ಬದ್ಧತೆಯನ್ನು ಹೊಂದಿರಬೇಕಾಗುತ್ತದೆ ಎಂಬ ಕಿವಿಮಾತನ್ನೂ ಸಚಿವರು ಈ ಸಂದರ್ಭದಲ್ಲಿ ಹೇಳಿದರು.
Leave a Comment