ಶತಕದಂಚಿನಲ್ಲಿ ಟೊಮೆಟೊ ದರ: 100 ರೂ. ಸನಿಹಕ್ಕೆ ತಲುಪಿದ ಗೂದೆಹಣ್ಣು
ನ್ಯೂಸ್ ಆ್ಯರೋ: ಕಳೆದ ಕೆಲ ದಿನಗಳಿಂದ ದಿನಬೆಳಗಾದರೆ ಒಂದಲ್ಲ ಒಂದು ವಸ್ತುಗಳ ದರ ಏರಿಕೆಯಾಗುತ್ತಲೇ ಇದೆ. ಅದರಲ್ಲೂ ಅಗತ್ಯ ತರಕಾರಿಗಳಾದ ಈರುಳ್ಳಿ, ಬೆಳ್ಳುಳ್ಳಿ ದರ ಗಗನ ಸಖಿಯಾಗಿದ್ದು, ಈ ಸಾಲಿಗೆ ಟೊಮೆಟೊ ಕೂಡ ಸೇರ್ಪಡೆಯಾಗಿದೆ.
ಕಳೆದ ಕೆಲ ದಿನಗಳಿಂದ ಈರುಳ್ಳಿ, ಬೆಳ್ಳುಳ್ಳಿ ದರ ಕೇಳಿದ್ರೆನೆ ಜನ ಹೆದರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಈಗಾಗಲೇ ಬೆಳ್ಳುಳ್ಳಿ ಕೆಜಿಗೆ 400 ರೂ. ದಾಟಿದ್ರೆ ಈರುಳ್ಳಿ 100 ರೂ. ಸನಿಹಕ್ಕೆ ಬಂದಿದೆ. ಈ ನಡುವೆ ಟೊಮೆಟೊ ಕೂಡ ಇದೇ ಸಾಲಿಗೆ ಸೇರಿದ್ದು. ಟೊಮೆಟೊ ದರ 100 ರೂ. ದರ ಏರಿಕೆಯಾಗಿದೆ.
ಕಳೆದ ನಾಲ್ಕೈದು ತಿಂಗಳ ಹಿಂದಷ್ಟೇ ಮಳೆ ಅಭಾವ ಮತ್ತು ರೋಗದ ಕಾರಣ ಭಾರೀ ಪ್ರಮಾಣದಲ್ಲಿ ಟೊಮೆಟೊ ಇಳುವರಿ ಕಡಿಮೆಯಾಗಿತ್ತು. ಪರಿಣಾಮ ಟೊಮೆಟೊ ದರ 100 ರೂ. ದಾಟಿತ್ತು. ಆ ಬಳಿಕ ಈಗ ಮತ್ತೆ ಅದೇ ಪರಿಸ್ಥಿತಿ ನಿರ್ಮಾಣ ಆಗಿ ದಿಢೀರ್ ದರ ಏರಿಕೆಯಾಗಿದ್ದು, ಟೊಮೆಟೊ ಕೊಳ್ಳೋಕು ಹಿಂದೂಮುಂದು ನೋಡುವ ಸ್ಥಿತಿ ನಿರ್ಮಾಣ ಆಗಿದೆ. ಈ ಬಾರಿ ಮಳೆ ಪ್ರಮಾಣ ಹೆಚ್ಚಾದ ಕಾರಣ ಇತರೆ ಜಿಲ್ಲೆಗಳಿಂದ ಬೆಂಗಳೂರಿಗೆ ಸರಬರಾಜು ಆಗುತ್ತಿದ್ದ ಟೊಮೆಟೊದಲ್ಲಿ ಭಾರೀ ಇಳಿಕೆ ಕಂಡಿದೆ. ಬೆಂಗಳೂರಿನ ಕೆಲ ಭಾಗಗಳಿಂದ ಮಾತ್ರ ಟೊಮೆಟೊ ಬರುತ್ತಿದ್ದು, ಸಂಪೂರ್ಣ ಪೂರೈಕೆ ಆಗುತ್ತಿಲ್ಲ. ಹೀಗಾಗಿ ದರ ಏರಿಕೆ ಆಗುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.
ಹೊರ ರಾಜ್ಯಗಳು ಕೂಡ ಹೆಚ್ಚಾಗಿ ರಾಜ್ಯದ ಟೊಮೆಟೊ ಮೇಲೆ ಅವಲಂಬನೆ ಕಾರಣ ಅನೇಕ ಗಡಿ ಜಿಲ್ಲೆಗಳು ಹೊರ ರಾಜ್ಯಗಳಿಗೆ ಹೆಚ್ಚಾಗಿ ಪೂರೈಕೆ ಮಾಡುತ್ತಿವೆ. ಇದು ಕೂಡ ದರ ಏರಿಕೆಗೆ ಕಾರಣ ಆಗುತ್ತಿದೆ. ಸದ್ಯ ಇದೇ ಪರಿಸ್ಥಿತಿ ಇನ್ನೂ ಒಂದೆರೆಡು ವಾರ ಮುಂದುವರಿಯುವ ಸಾಧ್ಯತೆ ಇದೆ.
ಟೊಮೆಟೊ ಹಣ್ಣಿಗೆ ಕನ್ನಡದಲ್ಲಿ ಹೆಸರಿದೆ. ನಿಜ ಹೇಳಬೇಕೆಂದರೆ, ಶೇಕಡಾ 100ರಲ್ಲಿ 90ಕ್ಕೂ ಅಧಿಕ ಮಂದಿ, ಟೊಮೆಟೊ ಎಂಬುದೇ ಕನ್ನಡದ ಹೆಸರು ಎಂದುಕೊಂಡಿದ್ದಾರೆ. ಆದರೆ ಅದು ಇಂಗ್ಲಿಷ್ ಪದ. ಇಂಗ್ಲಿಷ್ ಪದದ ಟೊಮೆಟೊ ಹಣ್ಣನ್ನು ಕನ್ನಡದಲ್ಲಿ ಗೂದೆಹಣ್ಣು ಎಂದು ಕರೆಯುತ್ತಾರೆ. ಹಿಂದಿನ ಕಾಲದಲ್ಲಿ ಈ ಹಣ್ಣನ್ನು ಹಿತ್ತಲಲ್ಲಿ ಬೆಳೆಯಲಾಗುತ್ತಿತ್ತು. ತಿಪ್ಪೆಯಲ್ಲಿ ಬೆಳೆಯುತ್ತಿದ್ದ ಈ ಹಣ್ಣನ್ನು ಅಡುಗೆಗೆ ಬಳಸುತ್ತಿರಲಿಲ್ಲ. ಆದರೆ, ನಾಟಿ ವೈದ್ಯರೊಬ್ಬರು ಪರೀಕ್ಷೆ ನಡೆಸಿದಾಗ ಗೂದೆಹಣ್ಣು ತಿನ್ನಲು ಯೋಗ್ಯವಾಗಿದೆ ಎಂದು ಹೇಳಿದ್ದರಂತೆ. ನಂತರ ತಿನ್ನುವವರ ಸಂಖ್ಯೆ ಹೆಚ್ಚಾಯಿತು. ಕಾಲ ಬದಲಾದಂತೆ ಹೊಲದಲ್ಲಿ ರೈತರು ಬೆಳೆಯುವುದನ್ನು ಆರಂಭಿಸಿದರು. ಆದರೀಗ ಟೊಮೆಟೊ ಅಥವಾ ಗೂದೆಹಣ್ಣು ಇಲ್ಲದಿದ್ದರೆ, ಸಾಂಬಾರ್ ಮಾಡೋಕೆ ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಬೆಳೆದಿದೆ.
Leave a Comment