ಸ್ವಾರ್ಥಕ್ಕಾಗಿ ಬಲಿಯಾದ ಕೂಡು ಕುಟುಂಬ : ಪ್ರಿಯಕರನಿಗಾಗಿ ತನ್ನ ಕುಟುಂಬದ 13 ಸದಸ್ಯರನ್ನು ಕೊಂದ ಯುವತಿ
ನ್ಯೂಸ್ ಆ್ಯರೋ: ತಾನು ಪ್ರೀತಿಸಿದ ಹುಡುಗನನ್ನು ಮದುವೆಯಾಗಲು ಬಿಡಲಿಲ್ಲ ಎಂದು ಯುವತಿಯೊಬ್ಬಳು 13 ಜನರಿದ್ದ ತನ್ನ ಇಡೀ ಕೂಡು ಕುಟುಂಬಕ್ಕೆ ವಿಷವುಣಿಸಿ ಕೊಂದ ಆಘಾತಕಾರಿ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ.
ಈಕೆಯ ವಿಷಪಾಶಕ್ಕೆ ಸಿಲುಕಿ ಸಾವನ್ನಪ್ಪಿದ್ದವರಲ್ಲಿ 3ರಿಂದ 20 ವರ್ಷ ಪ್ರಾಯದೊಳಗಿನ ಮಕ್ಕಳು ಕೂಡ ಇದ್ದಾರೆ. ಕಳೆದ ಆಗಸ್ಟ್ 19ರಂದು ಈಕೆಯೊಬ್ಬಳನ್ನು ಹೊರತುಪಡಿಸಿ ಈಕೆಯ ಇಡೀ ಕುಟುಂಬದವರು ಸಾವನ್ನಪ್ಪಿದ್ದರು. ಈ ಬಗ್ಗೆ ಅನುಮಾನ ಇದ್ದ ಹಿನ್ನೆಲೆಯಲ್ಲಿ ತನಿಖೆ ಮಾಡಿದಾಗ ಈಕೆಯೇ ಮನೆ ಮಂದಿಗೆ ಚಪಾತಿ ಹಿಟ್ಟಿನಲ್ಲಿ ವಿಷ ಉಣಿಸಿರುವುದು ಬೆಳಕಿಗೆ ಬಂದಿದೆ.
ಪಾಕ್ ನ ಸಿಂಧ್ ಪ್ರಾಂತ್ಯದ ಕೈರ್‌ಪುರ್ ಸಮೀಪದ ಹಬಿಬತ್ ಖಾನ್ ಬ್ರೋಹಿ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ತಾನು ಪ್ರೀತಿಸುತ್ತಿದ್ದ ಹುಡುಗನನ್ನು ಮದುವೆಯಾಗಲು ಬಿಡಲಿಲ್ಲ ಎಂದು ಸಿಟ್ಟಿಗೆದ್ದ ಯುವತಿ, ಚಪಾತಿ ಹಿಟ್ಟಿನಲ್ಲಿ ವಿಷ ಬೆರೆಸಿ ಮನೆ ಮಂದಿಗೆಲ್ಲಾ ಉಣ ಬಡಿಸಿದ್ದಾಳೆ. ತನ್ನ ಪ್ರಿಯಕರನ ಮಾತಿನಿಂದ ಪ್ರೇರಣೆಗೊಳಗಾಗಿ ಯುವತಿ ಈ ಕೃತ್ಯವೆಸಗಿದ್ದಾರೆ.
ಇವರಿಬ್ಬರ ಮದುವೆಗೆ ಎರಡೂ ಮನೆಯವರಿಂದ ವಿರೋಧವಿತ್ತು ಎನ್ನಲಾಗಿದೆ. ಹೀಗಾಗಿ ಯುವಕ ಆಕೆಗೆ ಮನೆ ಮಂದಿಗೆಲ್ಲಾ ವಿಷ ನೀಡಿ ಸಾಯಿಸುವಂತೆ ಸಲಹೆ ನೀಡಿದ್ದಾನೆ. ಆತನ ಮಾತು ಕೇಳಿ ಯುವತಿ ತನ್ನವರು ಎಂಬ ಯಾವುದೇ ಮಮಕಾರವಿಲ್ಲದೇ ಮನೆಯ ಪುಟ್ಟ ಮಕ್ಕಳ ಸಮೇತ ಇಡೀ ಮನೆ ಮಂದಿಗೆ ವಿಷ ಹಾಕಿ ಕತೆ ಮುಗಿಸಿದ್ದಾಳೆ. ಹೀಗೆ ಹಿಟ್ಟಿಗೆ ವಿಷ ಬೆರೆಸಿ ಮನೆ ಮಂದಿಯ ಕತೆ ಮುಗಿಸಿದ ಯುವತಿ ಹಾಗೂ ಪ್ರಿಯಕರನನ್ನು ಶಾಯಿಸ್ತಾ ಹಾಗೂ ಆಮೀರ್ ಭಕ್ಷ್ ಎಂದು ಗುರುತಿಸಲಾಗಿದೆ. ಕಳೆದ ದಿನ ಈಕೆ ಹಾಗೂ ಈಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಖಾಕಿ ಮುಂದೆ ಕೃತ್ಯವನ್ನು ಬಿಚ್ಚಿಟ್ಟಿದ್ದಾರೆ.
Leave a Comment