3 ಸಾವಿರ ಹಣಕ್ಕೆ ಬಿತ್ತು 2 ಹೆಣ: ಕೊಡಲಿಯಿಂದ ಕೊಚ್ಚಿ ಸ್ನೇಹಿತರನ್ನೇ ಕೊಂದ ಹಂತಕ
ನ್ಯೂಸ್ ಆ್ಯರೋ: ಜಿಲ್ಲೆಯ ಕುಶಾಲನಗರ ತಾ| ಕೂಡು ಮಂಗಳೂರು ಗ್ರಾಮದ ಬಸವೇಶ್ವರ ಬಡಾವಣೆಯಲ್ಲಿ ಕಳೆದ ರಾತ್ರಿ ಎರಡು ಹೆಣಗಳು ಉರುಳಿವೆ. ಅದು ಕೂಡ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತೋರ್ವನ ತಲೆಯ ಮೇಲೆ ಕೊಡಲಿ ತೂರಿತ್ತು. ಕೊಡಲಿ ಸಮೇತ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ತಲೆಯಿಂದ ಕೊಡಲಿ ತೆಗೆಯುತ್ತಿದ್ದಂತೆ ಮೃತಪಟ್ಟಿದ್ದಾನೆ.
ಬಸವೇಶ್ವರ ಬಡವಾಣೆಯ ಜೋಸೆಫ್, ಅವನ ಪಕ್ಕದ ಮನೆಯ ಗಿರೀಶ್ ಮತ್ತು ಸುಂದರ ನಗರದ ವಸಂತ್ ಎಲ್ಲರೂ ಸ್ನೇಹಿತರು. ಕಳೆದ 15-20 ವರ್ಷಗಳಿಂದ ಎಲ್ಲರೂ ಒಟ್ಟಿಗೇ ಕೆಲಸ ಮಾಡ್ತಾ ಇದ್ದವರು. ಆದ್ರೆ ಇತ್ತೀಚೆಗೆ ಕೆಲ ತಿಂಗಳಿನಿಂದ ಜೋಸೆಫ್ ಮತ್ತು ಗಿರೀಶನ ಮಧ್ಯೆ ಹಣಕಾಸು ವ್ಯವಹಾರಕ್ಕೆ ಸಂಬಂಧಪಟ್ಟಂತೆ ಭಿನ್ನಾಭಿಪ್ರಾಯ ತಲೆದೋರಿತ್ತು.
ಗಿರೀಶ್, ಜೋಸೆಫ್ಗೆ 3 ಸಾವಿರ ರೂ ಕೊಡಬೇಕಿತ್ತು. ಹಲವು ಬಾರಿ ಹಣ ಕೇಳಿದ್ರೂ ಕೊಟ್ಟಿರಲಿಲ್ಲ. ಇದೇ ವಿಚಾರದಲ್ಲಿ ಜಗಳವಾಗಿ 15 ದಿನಗಳಿಂದ ಗಿರೀಶ, ಜೋಸೆಫ್ ನ ಜೊತೆ ಕೆಲಸಕ್ಕೆ ಹೋಗುವುದನ್ನ ನಿಲ್ಲಸಿದ್ದ. ನಿನ್ನೆ ಮಧ್ಯಾಹ್ನ ಕೂಡ ಜೋಸೆಫ್, ಗಿರೀಶನ ಬಳಿ ಹಣ ಕೊಡವಂತೆ ಕೇಳಿದ್ನಂತೆ. ಕೊಡ್ತೀನಿ ಅಂತ ಸಮಾಧಾನದಿಂದಲೇ ಹೇಳಿದ್ದನಂತೆ. ಆದ್ರೆ ನಿನ್ನೆ ಸಂಜೆ ಮತ್ತೆ ಜಗಳ ಶುರುವಾಗಿದ್ದು, ಜೋಸೆಫ್ ಹಾಗು ಗಿರೀಶ್ ನಡುವೆ ಕಾಳಗ ಏರ್ಪಟ್ಟಿದೆ. ಪರಿಣಾಮ ಗಿರೀಶ್ ಕೊಡಲಿಯಿಂದ ಜೋಸೆಫ್ ತಲೆಗೆ ಹೊಡೆದಿದ್ದಾರೆ. ಈ ವೇಳೆ ವಸಂತ ಎಂಬಾತ ಗಿರೀಶ್ ನನ್ನು ತಡೆಯಲು ಮುಂದಾಗಿದ್ದಾನೆ. ಇದೇ ಸಿಟ್ಟಿನಲ್ಲಿ ಗಿರೀಶ್ ಅದೇ ಕೊಡಲಿಯಿಂದ ವಸಂತಗೆ ಬೀಸಿದ್ದಾನೆ. ಅದೆಷ್ಟು ರಣ ಭೀಕರವಾಗಿದೆ ಅಂದ್ರೆ ಆ ಕೊಡಲಿ ನೇರವಾಗಿ ವಸಂತನ ತಲೆಯೊಳಗೆ ಹೂತು ಹೋಗಿದೆ.
ಆಸ್ಪತ್ರೆಯಲ್ಲಿ ಕೊಡಲಿ ತೆಗೆಯುತ್ತಿದ್ದಂತೆ ವಸಂತ ಕೂಡ ಉಸಿರು ಚೆಲ್ಲಿದ್ದಾನೆ. ಘಟನೆ ಬಳಿಕ ಗಿರೀಶನನ್ನ ಕುಶಾಲನಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
Leave a Comment