ದೊಡ್ಮನೆಗೆ ನಗು ತಂದ ವಿಲನ್ ‘ಉಗ್ರಂ ಮಂಜು’; ಇವರ ಬಗ್ಗೆ ನಿಮಗೆಷ್ಟು ಗೊತ್ತು ?

bbk 11 contestant ugram-manju
Spread the love

ನ್ಯೂಸ್ ಆ್ಯರೋ: ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ “ಬಿಗ್‌ಬಾಸ್ ಕನ್ನಡ ಸೀಸನ್ 11” ರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಒಂದು ದಶಕಕ್ಕಿಂತಲೂ ಅಧಿಕ ಸಮಯದಿಂದ ನಟರಾಗಿರುವ ಉಗ್ರಂ ಮಂಜು ಎಂಟ್ರಿಕೊಟ್ಟಿದ್ದಾರೆ. ಆ ಮೂಲಕ ಪ್ರೇಕ್ಷಕರಿಗೆ ತಮ್ಮ ಇನ್ನೊಂದು ಮುಖ ತೋರಿಸಲು ಬಂದಿದ್ದಾರೆ. ಇಲ್ಲಿ ಚೆಂದನವನದ ಖಡಕ್ ವಿಲನ್ ಉಗ್ರಂ ಮಂಜು ಕುರಿತು ನಿಮಗೆ ಗೊತ್ತಿಲ್ಲದ ಇಂಟರೆಸ್ಟಿಂಗ್ ವಿಷಯಗಳನ್ನು ನೀಡಲಾಗಿದೆ.

ಇವರ ಮೊದಲ ಹೆಸರು ಮಂಜುನಾಥ್ ಗೌಡ. 10 ಅಕ್ಟೋಬರ್‌ 1985 ಇವರ ಜನ್ಮ ದಿನ. 2014ರಲ್ಲಿ ತೆರೆಕಂಡ ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ಶ್ರೀಮುರಳಿ ನಟಿಸಿದ್ದ ‘ಉಗ್ರಂ’ ಸಿನಿಮಾದಲ್ಲಿ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡರು. ಆ ಬಳಿಕ ಚಿತ್ರರಂಗದಲ್ಲಿ ‘ಉಗ್ರಂ ಮಂಜು’ ಅಂತಲೇ ಜನಪ್ರಿಯತೆ ಗಳಿಸಿದರು. ಅಂದ್ಹಾಗೆ ಇವರು ಮೂಲತಃ ಕೋಲಾರದವರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಇವರಿಗೆ 35 ವರ್ಷ ಎನ್ನಲಾಗಿದೆ.

ಉಗ್ರಂ ಮಂಜು ರಂಗಭೂಮಿ ಕಲಾವಿದ. ತಮ್ಮ ವಿಶಿಷ್ಟ ಧ್ವನಿಯಿಂದ ಜನಪ್ರಿಯತೆ ಗಳಿಸಿರುವ ಇವರು, ವಿಲನ್ ಪಾತ್ರಗಳಿಗೆ ಹೇಳಿ ಮಾಡಿಸಿದ ನಟ. ಸುದೀಪ್ ಅವರು ಮುಂಬರುವ ‘ಮ್ಯಾಕ್ಸ್’ ಸಿನಿಮಾದಲ್ಲಿ ಉಗ್ರಂ ಮಂಜು ಅವರು ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದರು. ಈ ಬಗ್ಗೆ ಬಿಗ್‌ಬಾಸ್ ವೇದಿಕೆಯಲ್ಲಿ ಮಾತನಾಡಿದ್ದ ಕಿಚ್ಚ, 100ಕ್ಕೂ ಹೆಚ್ಚು ದಿನ ಮಂಜು ನಮ್ಮೊಂದಿಗೆ ಕಾಲ ಕಳೆದಿದ್ದಾರೆ. ಇವರು ಕಲಾವಿದ ಮಾತ್ರವಲ್ಲ, ಅವರೊಳಗೆ ಒಬ್ಬ ಒಳ್ಳೆ ಮನುಷ್ಯನನ್ನು ನಾನು ನೋಡಿದ್ದೇನೆ ಎಂದಿದ್ದರು.


ಇನ್ನೂ ಮದುವೆಯಾಗದ ಉಗ್ರಂ ಮಂಜು:

ಉಗ್ರಂ ಮಂಜು ಅವರಿಗೆ ಇನ್ನೂ ಮದುವೆಯಾಗಿಲ್ಲ. ಈ ಬಗ್ಗೆ ಬಿಗ್‌ಬಾಸ್ ವೇದಿಕೆಯಲ್ಲಿ ಸುದೀಪ್ ಕೇಳಿದ್ದು, ಅವರ ತಾಯಿ ಇದಕ್ಕೆ ಉತ್ತರ ನೀಡಿದ್ದರು. ಕಳೆದ ಎಂಟು ವರ್ಷಗಳಿಂದ ನಾವು ಅವನಿಗೆ ಮದುವೆಯಾಗು ಅಂತ ಹೇಳುತ್ತಲೇ ಇದ್ದೇವೆ. ಅವನಿಗೆ ಮೂವರು ತಂಗಿಯರಿದ್ದಾರೆ. ಅವರ ಮದುವೆಯಾದ ಮೇಲೆ ಆಗ್ತೀನಿ ಅಂತ ಹೇಳಿದ್ದಾನೆ ಎಂದಿದ್ದರು. ಉಗ್ರಂ ಮಂಜು ಹೆಚ್ಚು ಮದ್ಯಪಾನ ಮಡುತ್ತಾರಂತೆ. ಈ ಬಗ್ಗೆ ಸುದೀಪ್ ಅವರೇ ವೇದಿಕೆ ಮೇಲೆ ಹೇಳಿದ್ದರು. ಮಗನಿಗೆ ಅದೊಂದು ಅಭ್ಯಾಸವಿರುವುದಕ್ಕೆ ಮಂಜು ತಂದೆ ಬೇಸರ ವ್ಯಕ್ತಪಡಿಸಿದ್ದರು.

ಬಹುಮುಖ ಪ್ರತಿಭೆ ಉಗ್ರಂ ಮಂಜು:

ಉಗ್ರಂ ಮಂಜು ಬಹುಮುಖ ಪ್ರತಿಭೆ. ಟಾಸ್ಕ್, ಎಂಟರ್‌ಟೈನ್ಮೆಂಟ್ ಎಲ್ಲರದರಲ್ಲೂ ಮುಂದಿದ್ದಾರೆ. ಮಂಗಳವಾರದ ಎಪಿಸೋಡ್‌ನಲ್ಲಿ ಶಿಶಿರ್ & ಯಮುನಾ ನಡುವೆ ಜಗಳವಾಗಿತ್ತು. ಜೊತೆಗೆ ಚೈತ್ರಾ-ಮಾನಸ ನಡುವೆಯೂ ಮುನಿಸು ಆರಂಭವಾಗಿತ್ತು. ನಾಮಿನೇಷನ್‌ನಿಂದಾಗಿ ಎಲ್ಲಾ ಸ್ಪರ್ಧಿಗಳು ಗರಂ ಆಗಿದ್ದರು. ಆದರೆ, ಅಂದು ಉಗ್ರಂ ಮಂಜು ಕಾಮಿಡಿ ಮಾಡಿ ಎಲ್ಲರನ್ನು ನಗಿಸಿದ್ದರು. ಮೊದಲು ಸ್ವರ್ಗವಾಸಿಗಳತ್ತ ತೆರಳಿ ಯಮುನಾ ಹಾಗೂ ಜಗದೀಶ್ ಅವರಂತೆ ನಟಿಸಿ, ನಗೆ ಪಟಾಕಿ ಹಚ್ಚಿದರು. ಬಳಿಕ ನರಕ ವಾಸಿಗಳತ್ತ ತೆರಳಿ ಅಲ್ಲಿಯೂ ಮಿಮಿಕ್ರಿ ಮಾಡಿ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದ್ದರು. ಮಂಜು ಅವರ ಆಟದ ವೈಖರಿ ಕಂಡು ಪ್ರೇಕ್ಷಕರು ಕೂಡ ಮೆಚ್ಚುಗೆ ಸೂಚಿಸಿದ್ದರು.

ಕಿಡಿ, ಮಂಜರಿ, ರುಸ್ತುಂ, ಉಗ್ರಂ, ಹೀರೋ, ಎಲ್ಲೋ ಬೋರ್ಡ್‌, ತೂತು ಮಡಿಕೆ ಸಂತು ಸ್ಟ್ರೇಟ್ ಫಾರ್ವರ್ಡ್, ಕಿರಿಕ್ ಪಾರ್ಟಿ, ಮಾಸ್ ಲೀಡರ್, ಅಂಬಿ ನಿಂಗ್ ವಯಸ್ಸಾಯ್ತೋ!, ಭರಾಟೆ, ದೂರದರ್ಶನ, ಬುದ್ಧಿವಂತ 2, ರಾನಿ, ಮ್ಯಾಕ್ಸ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾಗಳನ್ನು ತಮ್ಮದೇಯಾದ ಮ್ಯಾನರಿಸಂನಿಂದ ಪ್ರೇಕ್ಷಕರನ್ನು ರಂಜಿಸಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!