ಪಾಕ್ ತಂಡದ ನಾಯಕತ್ವಕ್ಕೆ ಬಾಬರ್ ಆಝಂ ರಾಜೀನಾಮೆ

Babar Azam Pakistani cricketer
Spread the love

ನ್ಯೂಸ್ ಆ್ಯರೋ:ಪಾಕಿಸ್ತಾನ್ ತಂಡದ ನಾಯಕತ್ವದಿಂದ ಬಾಬರ್ ಆಝಂ ಕೆಳಗಿಳಿದಿದ್ದಾರೆ. ಈ ಹಿಂದೆಯೇ ಟೆಸ್ಟ್ ತಂಡದ ನಾಯಕತ್ವದಿಂದ ರಾಜೀನಾಮೆ ನೀಡಿದ್ದ ಬಾಬರ್ ಇದೀಗ ಟಿ20 ಹಾಗೂ ಏಕದಿನ ತಂಡಗಳ ಕ್ಯಾಪ್ಟನ್ಸಿಯನ್ನು ತ್ಯಜಿಸಿದ್ದಾರೆ. ಇದರೊಂದಿಗೆ ಮುಂಬರುವ ಚಾಂಪಿಯನ್ಸ್​ ಟ್ರೋಫಿಯಲ್ಲಿ ಪಾಕ್ ತಂಡವನ್ನು ಹೊಸ ನಾಯಕ ಮುನ್ನಡೆಸುವುದು ಖಚಿತವಾಗಿದೆ.

ಇದಕ್ಕೂ ಮುನ್ನ, 2023 ರಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ಪಾಕಿಸ್ತಾನ್ ತಂಡದ ಹೀನಾಯ ಪ್ರದರ್ಶನದ ಹಿನ್ನಲೆಯಲ್ಲಿ ಬಾಬರ್ ಆಝಂ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಅಲ್ಲದೆ ಟಿ20 ತಂಡ ಹಾಗೂ ಏಕದಿನ ತಂಡಗಳಿಗೆ ಶಾಹೀನ್ ಅಫ್ರಿದಿಯನ್ನು ಹಾಗೂ ಟೆಸ್ಟ್ ಕ್ರಿಕೆಟ್​ಗೆ ಶಾನ್ ಮಸೂದ್ ಅವರನ್ನು ಹೊಸ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು.

ಅದರಂತೆ ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಶಾಹೀನ್ ಅಫ್ರಿದಿ ನಾಯಕತ್ವದಲ್ಲಿ ಕಣಕ್ಕಿಳಿದ ಪಾಕಿಸ್ತಾನ್ ತಂಡವು 4-1 ಅಂತರದಿಂದ ಸೋಲನುಭವಿಸಿತ್ತು. ಇದರ ಬೆನ್ನಲ್ಲೇ ಶಾಹೀನ್ ನಾಯಕತ್ವದ ಬಗ್ಗೆ ಅಪಸ್ವರಗಳು ಕೇಳಿ ಬಂದಿದ್ದವು. ಹೀಗಾಗಿ 2024ರ ಟಿ20 ವಿಶ್ವಕಪ್​ಗೂ ಮುನ್ನ ಬಾಬರ್ ಆಝಂ ಅವರನ್ನು ಮತ್ತೆ ನಾಯಕನಾಗಿ ನೇಮಿಸಲಾಯಿತು.

ಆದರೆ ಟಿ20 ವಿಶ್ವಕಪ್​ನಲ್ಲಿ ಬಾಬರ್ ಆಝಂ ಮುಂದಾಳತ್ವದಲ್ಲಿ ಕಣಕ್ಕಿಳಿದ ಪಾಕ್ ಪಡೆಯು ಯುಎಸ್​ಎ ವಿರುದ್ದ ಪರಾಜಯಗೊಳ್ಳುವ ಮೂಲಕ ಭಾರೀ ಮುಖಭಂಗಕ್ಕೊಳಗಾಗಿತ್ತು. ಅಲ್ಲದೆ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು. ಹೀಗಾಗಿ ಬಾಬರ್ ಆಝಂ ಅವರನ್ನು ನಾಯಕತ್ವದಿಂದ ಕೆಳಗಿಳಿಸುವುದು ಬಹುತೇಕ ಖಚಿತ ಎನ್ನಲಾಗಿತ್ತು.

ಅದರಂತೆ ಇದೀಗ ಖುದ್ದು ಬಾಬರ್ ಆಝಂ ಟಿ20 ಹಾಗೂ ಏಕದಿನ ತಂಡಗಳ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಈ ಮೂಲಕ ಇನ್ಮುಂದೆ ಕೇವಲ ಆಟಗಾರನಾಗಿ ತಂಡದಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ. ಇಲ್ಲಿ ಪಾಕಿಸ್ತಾನ್ ತಂಡದ ನೂತನ ನಾಯಕನಾಗಿ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಝ್ವಾನ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

Leave a Comment

Leave a Reply

Your email address will not be published. Required fields are marked *

error: Content is protected !!