ಬೆಳ್ತಂಗಡಿ : ಬೆಳಾಲು ನಿವೃತ್ತ ಶಿಕ್ಷಕನ ಕೊಲೆ ಪ್ರಕರಣ – ತನಿಖೆಗೆ ಮೂರು ಪೋಲಿಸ್ ತಂಡ ರಚಿಸಿದ ಎಸ್ಪಿ ; ಪೂರ್ವ ದ್ವೇಷ ಹಿನ್ನೆಲೆಯಲ್ಲಿ ಕೃತ್ಯ…!?
ನ್ಯೂಸ್ ಆ್ಯರೋ : ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಎಸ್.ಪಿ.ಬಿ. ಕಾಂಪೌಂಡ್ ನಿವಾಸಿ ನಿವೃತ್ತ ಶಾಲಾ ಮುಖ್ಯೋಪಾಧ್ಯಾಯ ಎಸ್.ಪಿ. ಬಾಲಕೃಷ್ಣ ಬಡೆಕ್ಕಿಲ್ಲಾಯ (83) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಪೋಲಿಸ್ ತಂಡಗಳನ್ನು ರಚಿಸಲಾಗಿದ್ದು, ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಕೊಲೆಯ ತನಿಖೆಗಾಗಿ ಎಸ್ಪಿ ಯತೀಶ್ ಎನ್ ಅವರ ನಿರ್ದೇಶನದಂತೆ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯಪ್ರಸಾದ್ ನೇತೃತ್ವದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ತಂಡ, ಧರ್ಮಸ್ಥಳ ಇಬ್ಬರು ಉಪನಿರೀಕ್ಷಕರ ತಂಡ ಹಾಗೂ ಇನ್ನೊಂದು ಪೋಲಿಸರ ತಂಡ ರಚಿಸಲಾಗಿದ್ದು, ವಿವಿಧ ಆಯಾಮಗಳಲ್ಲಿ ಪೋಲಿಸರು ತನಿಖೆ ಆರಂಭಿಸಿದ್ದಾರೆ.
ಕೊಲೆಯಾದ ಬಾಲಕೃಷ್ಣ ಭಟ್ ಅವರ ಕಿರಿಯ ಪುತ್ರ ಸುರೇಶ್ ಭಟ್ ಅವರು ನೀಡಿದ ದೂರಿನಂತೆ ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೇಲ್ನೋಟಕ್ಕೆ ಇದು ದರೋಡೆಗಾಗಿ ಎಸಗಿದ ಕೃತ್ಯವಲ್ಲ ಎಂಬುದು ಪೋಲಿಸರ ಗಮನಕ್ಕೆ ಬಂದಿತ್ತು.
ಇನ್ನು ಕೊಲೆಯಾದ ಬಳಿಕ ಮೃತರ ಕಿರಿಯ ಪುತ್ರ ಮನೆಯಲ್ಲಿ ಇಲ್ಲದ ಕಾರಣ ಆತನ ಮೇಲೆಯೇ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಮನೆ ಕೆಲಸ ಮುಗಿಸಿ ಕೆಲಸದ ನಿಮಿತ್ತ ಪುತ್ತೂರು ತೆರಳಿದ್ದು, ಸಂಜೆ ವಾಪಾಸ್ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿತ್ತು ಎನ್ನಲಾಗಿದೆ.
ಇದುವರೆಗೆ ಪೋಲಿಸರಿಗೆ ಕೊಲೆಗೆ ಸಂಬಂಧಿಸಿದಂತೆ ಯಾವುದೇ ಸುಳಿವು ಲಭ್ಯವಾಗದ ಹಿನ್ನೆಲೆಯಲ್ಲಿ ವೈಜ್ಞಾನಿಕ ಅಥವಾ ತಾಂತ್ರಿಕ ಸಹಾಯದ ಮೂಲಕ ಕೊಲೆ ಆರೋಪಿಗಳ ಪತ್ತೆಗೆ ಪೋಲಿಸರು ಮುಂದಾಗಿದ್ದಾರೆ.
ಬಾಲಕೃಷ್ಣ ಭಟ್ ಅವರನ್ನು ಮಾರಕಾಸ್ತ್ರ ಬಳಸಿ ಕೊಲೆ ಮಾಡಲಾಗಿದೆಯಾದರೂ, ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವಂತೆ ಕೊಲೆಯನ್ನು ಬಿಂಬಿಸಲಾಗಿತ್ತು. ತನಿಖೆಯ ದಾರಿ ತಪ್ಪಿಸುವ ಜೊತೆಗೆ ದುಷ್ಕರ್ಮಿಗಳು ಯಾವುದೇ ಸುಳಿವು ಬಿಟ್ಟುಕೊಡದಿರುವುದು ಪೋಲಿಸರಿಗೆ ಈ ಪ್ರಕರಣ ಸವಾಲಾಗಿ ಪರಿಣಮಿಸಿದೆ. ಈಗಾಗಲೇ ಘಟನಾ ಸ್ಥಳಕ್ಕೆ ಎಸ್ಪಿ ಯತೀಶ್ ಎನ್. ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮನೆಯವರಿಂದ ಹಾಗೂ ಪೊಲೀಸರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
Leave a Comment