ಮುಡಾ ಹಗರಣದಲ್ಲಿ ಸಿಎಂ ಗೆ ತಪ್ಪದ ಸಂಕಷ್ಟ – ಸಿಎಂ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

20240817 123838
Spread the love

ನ್ಯೂಸ್ ಆ್ಯರೋ : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕೋರ್ಟಿಗೆ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ವಿಚಾರಣೆಯನ್ನು 29ಕ್ಕೆ ಮುಂದೂಡಿ ಆದೇಶ ಹೊರಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ಆರಂಭಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಪರವಾಗಿ ಅಭಿಷೇಕ್ ಮನುಸಿಂಗ್ವಿ ವಾದ ಮಂಡಿಸಿದ್ದು, ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ವಕೀಲ ತುಷಾರ ಮೆಹ್ತಾ ವಾದ ಮಂಡಿಸಿದರು.

ಈ ವೇಳೆ ತುಷಾರ್ ಮೆಹ್ತಾ ಅವರು ನಾಳೆ ಅರ್ಜಿಯ ವಿಚಾರಣೆ ಮುಂದೂಡಬೇಕು ಎಂದು ಮನವಿ ಮಾಡಿದಾಗ, ನಾಳೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ವಿಚಾರಣೆ ಇದೆ. ಮಧ್ಯಂತರ ಆದೇಶ ಬೇಕಿರುವುದರಿಂದ ಇಂದೇ ವಿಚಾರಣೆ ನಡೆಸಬೇಕು. ರಾಜ್ಯಪಾಲರ ಕಚೇರಿಗೆ ಅರ್ಜಿಯ ಪ್ರತಿ ನೀಡಿದ ಮಾತ್ರಕ್ಕೆ ಅವರ ವಾದ ಕೇಳಬೇಕಿಲ್ಲ ಎಂದು ಸಿಎಂ ಪರ ಅಭಿಷೇಕ್ ಮನುಸಿಂಗ್ವಿ ವಾದಿಸಿದರು.

ರಾಜ್ಯಪಾಲರ ಶೋಕಾಸ್ ನೋಟಿಸ್ ಗೆ ಉತ್ತರ ನೀಡಲಾಗಿತ್ತು. ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ದೂರುಗಳು ಉದ್ದೇಶಪೂರಿತ. ಶೋಕಾಸ್ ನೋಟಿಸ್ ಗೆ ಕ್ಯಾಬಿನೆಟ್ ಸಲಹೆ ಕೂಡ ಕೊಟ್ಟಿದೆ. ಕ್ಯಾಬಿನೆಟ್ ಸಲಹೆ ಪರಿಗಣಿಸದೆ, ರಾಜ್ಯಪಾಲರು 100 ಪುಟಗಳ ಕ್ಯಾಬಿನೆಟ್ ಸಲಹೆಗೆ ಎರಡು ಪುಟಗಳ ಉತ್ತರ ಕೊಟ್ಟಿದ್ದಾರೆ ಎಂದು ಅಭಿಷೇಕ್ ಮನುಸಿಂಗ್ವಿ ವಾದಿಸಿದರು.

ಸರ್ಕಾರವನ್ನು ಅಸ್ಥಿರಗೊಳಿಸಲು ಇಂತಹ ಕ್ರಮವಾಗುತ್ತಿದೆ. ರಾಜೀನಾಮೆ ಪಡೆಯಲು ಈಗ ರಾಷ್ಟ್ರಪತಿ ಆಳ್ವಿಕೆ ಅಗತ್ಯವಿಲ್ಲ. ಕೇವಲ ಇಂತಹ ದೂರುಗಳ ಮೂಲಕ ಉದ್ದೇಶ ಈಡೇರುತ್ತಿದೆ. ಸರ್ಕಾರಿ ಸೇವಕನಾಗಿ ಸಿಎಂ ಯಾವುದೇ ಶಿಫಾರಸ್ಸು ಮಾಡಿಲ್ಲ. ಮುಡಾ ಫೈಲ್ ಸಂಬಂಧ ಯಾವುದೇ ನಿರ್ಧಾರ ಸಿಎಂ ಮಾಡಿಲ್ಲ ಎಂದು ವಾದಿಸಿದರು.

ಹೊಸ ಬಿಎನ್‌ಎಸ್ ಕಾಯಿದೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ತಮ್ಮ ಕರ್ತವ್ಯದ ಭಾಗವಾಗಿ ಸಿಎಂ ನಿರ್ಧಾರ ಕೈಗೊಂಡಿಲ್ಲ. ಆದರೂ ವಿವೇಚನಾ ರಹಿತವಾಗಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಕ್ಯಾಬಿನೆಟ್ ಸಲಹೆಯನ್ನು ತಿರಸ್ಕರಿಸಿ ಆದೇಶ ನೀಡುವ ಹಾಗಿಲ್ಲ. ಇದಕ್ಕೆ ವಿವರಣೆಯಾಗಿ ಮಧ್ಯಪ್ರದೇಶದ ತೀರ್ಪನ್ನು ಕೂಡ ಮನುಸಿಂಗ್ವಿ ಉಲ್ಲೇಖಿಸಿದರು.

ಎರಡೂ ಕಡೆಯ ವಾದ ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ವಿಚಾರಣೆಯನ್ನು 29ಕ್ಕೆ ಮುಂದೂಡಿ ಆದೇಶ ಹೊರಡಿಸಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ಕೋರ್ಟ್ ನಲ್ಲಿ ಕೊಂಚ ಹಿನ್ನಡೆಯಾದಂತಾಗಿದೆ. ಅಲ್ಲದೇ ಹೈಕೋರ್ಟ್ ನಲ್ಲಿ ದಾಖಲಾದ ಎರಡು ದೂರುಗಳ ಪೈಕಿ ಇದೇ 20, 21 ರಂದು ವಿಚಾರಣೆ ನಡೆಯಲಿದೆ.

Leave a Comment

Leave a Reply

Your email address will not be published. Required fields are marked *

error: Content is protected !!