Prosecution : ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಹಿನ್ನೆಲೆ – ಸಿದ್ದು ಬೆನ್ನಿಗೆ ನಿಂತ ಹೈಕಮಾಂಡ್, ರಾಷ್ಟ್ರ ನಾಯಕರು ಬೆಂಗಳೂರಿನತ್ತ..!!
ನ್ಯೂಸ್ ಆ್ಯರೋ : ದಿಢೀರ್ ರಾಜಕೀಯ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡುವ ಕಡತಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಹಿ ಹಾಕಿದ್ದು, ಕಾಂಗ್ರೆಸ್ ಹೈಕಮಾಂಡ್ ಸಿದ್ದು ಬೆನ್ನಿಗೆ ನಿಲ್ಲುವ ಸೂಚನೆ ಸಿಕ್ಕಿದೆ.
ಈಗಾಗಲೇ ಹೈಕಮಾಂಡ್ ಸಿಎಂ ಸಿದ್ದರಾಮಯ್ಯಗೆ ಅಭಯ ನೀಡಿದ್ದು, ಎಐಸಿಸಿ ನಾಯಕರಾದ ರಣದೀಪ್ ಸುರ್ಜೆವಾಲಾ ಹಾಗೂ ಕೆ.ಸಿ. ವೇಣುಗೋಪಾಲ್ ಕರೆ ಮಾಡಿ ಸಿಎಂ ಸಿದ್ದರಾಮಯ್ಯಗೆ ಧೈರ್ಯ ತುಂಬಿದ್ದಾರೆ. ನಿಮ್ಮ ಜೊತೆಗೆ ನಾವು ಇದ್ದೇವೆ ನೀವು ಧೈರ್ಯವಾಗಿರಿ, ಏನೇ ಆದರೂ ಕಾನೂನು ಹೋರಾಟ ಮಾಡೋಣ ಎಂದು ಹೇಳಿದ್ದಾರೆ ಎನ್ನಲಾಗಿದ್ದು, ಇಂದು ಸಂಜೆಯೇ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ.
ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದು, ಪ್ರಸ್ತುತ ರಾಜ್ಯ ರಾಜಕೀಯ ಬೆಳವಣಿಗೆ ಹಾಗೂ ಮುಂದಿನ ಹೋರಾಟಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ದೂರದಾರ ಟಿ.ಜೆ. ಅಬ್ರಾಹಂಗೆ ರಾಜ್ಯಪಾಲರ ಕಚೇರಿಯಿಂದ ಕರೆ ಬಂದಿದ್ದು, ರಾಜ್ಯಪಾಲರ ಕಚೇರಿಗೆ ಆಗಮಿಸಿ ದಾಖಲೆ ಸಲ್ಲಿಸುವಂತೆ ಸೂಚಿಸಲಾಗಿದೆ. ಸದ್ಯ ಮಡಿಕೇರಿಯಿಂದ ಬೆಂಗಳೂರಿನತ್ತ ಹೊರಟಿರುವ ಟಿ.ಜೆ. ಅಬ್ರಾಹಂ ಮತ್ತಷ್ಟು ದಾಖಲೆಗಳನ್ನು ತೆಗೆದುಕೊಂಡು ರಾಜ್ಯಪಾಲರ ಕಚೇರಿ ತಲುಪಲಿದ್ದಾರೆ.
ತುರ್ತು ಸಚಿವ ಸಂಪುಟ ಸಭೆ ರದ್ದು
ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ಹಿನ್ನೆಲೆಯಲ್ಲಿ ತುರ್ತು ಸಚಿವ ಸಂಪುಟ ಸಭೆಯನ್ನು ಇಂದು ಸಂಜೆ ಕರೆಯಲಾಗಿತ್ತು. ಆದರೆ ಮುಂದೆ ಕಾನೂನು ಪ್ರಕ್ರಿಯೆಗೆ ತೊಡಕಾಗುವ ಹಿನ್ನೆಲೆಯಲ್ಲಿ ಅದನ್ನು ರದ್ದು ಪಡಿಸಲಾಗಿದೆ.
Leave a Comment