Mangalore : ರೌಡಿ ಶೀಟರ್‌ ಸಮೀರ್ ಕೊಲೆಯ ಹಿಂದೆ ಕಾಣದ ಕೈಗಳ ಕೈವಾಡ ಗುಮಾನಿ – ಕೊಲೆಗೆ ಕುಮ್ಮಕ್ಕು ನೀಡಿದ್ಯಾರು? ಸಮೀರ್ ಗೆ ತಡರಾತ್ರಿ ಕರೆ ಮಾಡಿದ “ಆಪ್ತಮಿತ್ರ” ಯಾರವನು?

20240816 092850
Spread the love

ನ್ಯೂಸ್ ಆ್ಯರೋ ‌: ಕಳೆದ ಭಾನುವಾರ ಕಲ್ಲಾಪಿನಲ್ಲಿ ನಾಲ್ವರು ದುಷ್ಕರ್ಮಿಗಳಿಂದ ಕೊಲೆಯಾದ ರೌಡಿ ಶೀಟರ್ ಕಡಪ್ಪರ ಸಮೀರ್ ಕೊಲೆ ಹಿಂದೆ ಕಾಣದ ಕೈಗಳ ಕೈವಾಡ ಇರುವ ಬಗ್ಗೆ ಗುಸುಗುಸು ಆರಂಭವಾಗಿದ್ದು, ಪೋಲಿಸರು ಮಾತ್ರ ಟಾರ್ಗೆಟ್ ಇಲ್ಯಾಸ್ ಕೊಲೆಗೆ ಈ ಪ್ರತೀಕಾರ ಎಂದು ಷರಾ ಬರೆಯಲು ಹೊರಟ ಬಗ್ಗೆ ವ್ಯಾಪಕ ಚರ್ಚೆ ಆರಂಭವಾಗಿದೆ.

ಬಹಳ ಸಮಯದಿಂದ ಶಾಂತವಾಗಿದ್ದ ಮಂಗಳೂರಿನ ಕ್ರೈಂ ಲೋಕ ಮತ್ತೆ ನಿದ್ದೆಯಿಂದ ಎದ್ದಂತೆ ದಿಢೀರನೇ ಎದ್ದು ಕೂತಿದೆ. ಮಾಜಿ ಕಮೀಷನರ್ ಶಶಿಕುಮಾರ್ ಅವಧಿಯಲ್ಲಿ ಸರಣಿ ಕೊಲೆಗಳ ಬಳಿಕ ಡಿಸಿಪಿ ಹರಿರಾಂ ಶಂಕರ್ ಮುಂದಾಳತ್ವದಲ್ಲಿ ರೌಡಿ ಗ್ಯಾಂಗ್ ನ ಚಟುವಟಿಕೆಗಳನ್ನು ಪೋಲಿಸರು ಮಟ್ಟ ಹಾಕಿದ್ದು, ಶಶಿಕುಮಾರ್ ಬಳಿಕ ಕುಲದೀಪ್ ಕುಮಾರ್ ಜೈನ್ ಅವಧಿಯಲ್ಲಿ ಮಂಗಳೂರಿನ ಕ್ರೈಂ ರೇಟ್ ಸಂಪೂರ್ಣ ಕುಸಿದು ಹೋಗಿತ್ತು.‌

ಇದೀಗ ಮತ್ತೆ ಮಂಗಳೂರಿನ ಪಾತಕ ಲೋಕ ತನ್ನ ಬಾಲ ಬಿಚ್ಚಿದ್ದು, ಪೋಲಿಸರು ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸದೇ ಆರೋಪಿಗಳನ್ನು ಸರೆಂಡರ್‌ ಮಾಡಿಸಿ ಕೈತೊಳೆದುಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

Fb Img 17237246500774582395191102288856

ಕೊಲೆಗೆ ಸಂಬಂಧಿಸಿದಂತೆ ಕಿನ್ಯ ನಿವಾಸಿ ನಿಯಾಝ್, ಸುರತ್ಕಲ್ ಕೃಷ್ಣಾಪುರದ ಮಹಮ್ಮದ್ ನೌಶಾದ್, ಬಜಾಲ್ ಶಾಂತಿನಗರದ ತನ್ವೀರ್ ಯಾನೆ ತನ್ನು ಮತ್ತು ಕಾಪು ಮಜೂರಿನ ಮುಹಮ್ಮದ್ ಇಕ್ಬಾಲ್ ಯಾನೆ ಇಕ್ಕು ಬಂಧಿತ ಆರೋಪಿಗಳು. ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರನ್ನು ಉಳ್ಳಾಲ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪೈಕಿ ಮಹಮ್ಮದ್ ನೌಶಾದ್ ಟಾರ್ಗೆಟ್ ಇಲ್ಯಾಸ್ ನ ಪತ್ನಿಯ ಸಹೋದರನಾಗಿದ್ದು, ಕ್ರೈಂ ಫೀಲ್ಡ್ ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾನೆ.

ಹಾಗೆ ನೋಡಿದರೆ ಕೊಲೆಯಾದ ಕಡಪ್ಪರ ಸಮೀರ್ ಪಾತಕ ಲೋಕಕ್ಕೆ ಕಾಲಿಟ್ಟಿದ್ದು ಅನಿವಾರ್ಯವಾಗಿ. ಗೆಳೆಯನೊಬ್ಬನಿಗೆ ಟಾರ್ಗೆಟ್ ಇಲ್ಯಾಸ್ ಕಡೆಯವರು ಹೊಡೆದರೆಂಬ ಕಾರಣಕ್ಕೆ ಇಲ್ಯಾಸ್ ಗ್ಯಾಂಗ್ ಜೊತೆ ಹಗೆ ಸಾಧಿಸಿ ಇಲ್ಯಾಸ್ ಗ್ಯಾಂಗ್ ನ ವಿರೋಧಿ ಬಣ ದಾವೂದ್ ಗ್ಯಾಂಗ್ ಸೇರಿಕೊಂಡವ.‌ ಶತ್ರುವಿನ ಶತ್ರು‌ ಮಿತ್ರನೆಂಬ ಲೆಕ್ಕಾಚಾರ ಮೊದಲಿಗೆ ಎಲ್ಲವೂ ವರ್ಕೌಟ್ ಆಗಿತ್ತು. ಇದಾದ ಬಳಿಕವೇ ಇಲ್ಯಾಸ್ ಕೊಲೆಗೆ ಮುಹೂರ್ತ ಫಿಕ್ಸ್ ಮಾಡಿದ ದಾವೂದ್ ಮತ್ತು ಸಮೀರ್ ತನ್ನ ಗ್ಯಾಂಗ್ ನ ಸಹಚರರಾದ ನಾಸಿರ್ ನಚ್ಚಿ, ರಿಯಾ ರಿಯಾಜ್, ನಮೀರ್ ಹಂಝಾ ಜೊತೆ ಸೇರಿ ಮನೆಯಲ್ಲಿ ಮಲಗಿದ್ದ ವೇಳೆಯೇ ಇಲ್ಯಾಸ್ ಕಥೆ ಮುಗಿಸಿಬಿಟ್ಟಿದ್ದರು.

20240816 0948165877955940723122993
ಕೊಲೆಯಾದ ಟಾರ್ಗೆಟ್ ಇಲ್ಯಾಸ್

ಇಲ್ಯಾಸ್ ಕೊಲೆಯ ಬಳಿಕ ತನ್ನ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಿಸಿಕೊಂಡ ಸಮೀರ್ ತನ್ನದೇ ಪಟಾಲಂ ಕಟ್ಟಿಕೊಂಡಿದ್ದ. ಉಳ್ಳಾಲದ ಮತ್ತೊಬ್ಬ ರೌಡಿಗೆ ಸಮೀರ್ ನ ಈ ಬೆಳವಣಿಗೆ ಸಹಿಸಲು ಸಾಧ್ಯವಾಗುತ್ತಿರಲಿಲ್ಲ ಎಂಬ ಮಾತೂ ಇದೆ. ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಮತ್ತೆ ಜೈಲು ಸೇರಿದ್ದ ಸಮೀರ್ ನನ್ನು ಅಲ್ಲೇ ಮುಗಿಸಲು ಪ್ಲ್ಯಾನ್ ಹಾಕಲಾಗಿತ್ತಾದರೂ ಅದು ಫ್ಲಾಪ್ ಆಗಿತ್ತು. ಅದಕ್ಕೂ ಮೊದಲು ಸಮೀರ್ ನನ್ನು ಮುಗಿಸಲು ವಿರೋಧಿ ಗ್ಯಾಂಗ್ ಹಾಕಿದ್ದ ಸಂಚನ್ನು ಪೋಲಿಸರೇ ವಿಫಲಗೊಳಿಸಿದ್ದರು.

ಸಮೀರ್ ಪತ್ನಿ ದೂರಿನ ಪ್ರಕಾರ ಸಮೀರ್ ಕಲ್ಲಾಪಿಗೆ ಬರುವ ವೇಳೆ ಕರೆ ಮಾಡಿದ ಆಪ್ತನೊಬ್ಬ ವಿಕೆ ಫರ್ನಿಚರ್ಸ್ ಬಳಿ ಬರುವಂತೆ ಹೇಳಿದ್ದ. ಅಲ್ಲಿಗೆ ಬಂದಿದ್ದ ಸಮೀರ್ ನನ್ನು ಅಲ್ಲೇ ಯಮಲೋಕಕ್ಕೆ ಕಳಿಸಿದ್ದ ಗ್ಯಾಂಗ್ ಕತ್ತಲಲ್ಲಿ ಪರಾರಿಯಾಗಿತ್ತು. ಆದರೆ ಸಮೀರ್ ಗೆ ಕರೆ ಮಾಡಿದವ ಯಾರು ಎಂಬ ಬಗ್ಗೆ ಪೋಲಿಸರು ಇನ್ನೂ ಹೇಳಿಲ್ಲ. ಕೊಲೆಯಾದ ಎರಡು ದಿನಗಳ ಬಳಿಕ ಪೋಲಿಸರು ವಶಕ್ಕೆ ಪಡೆದ ಆರೋಪಿಗಳನ್ನು ಬಂಧಿಸಿದ್ದರೂ ಅದಕ್ಕೊಂದು ಪ್ರೆಸ್ ಮೀಟ್ ಅಥವಾ ಪ್ರೆಸ್ ನೋಟ್ ಕೂಡ ಬಿಡುಗಡೆ ಮಾಡದೇ ನಿರ್ಲಕ್ಷ್ಯ ವಹಿಸಿದ್ದು ಪೋಲಿಸ್ ಇಲಾಖೆಯ ಮೇಲೆಯೇ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುವಂತೆ ಆಗಿದೆ.

20240816 0950443429429429009282553

ಸಮೀರ್ ಕೊಲೆಗೆ ಕಾರಣವೇನು ಎಂಬ ಬಗ್ಗೆ ಪೋಲಿಸರು ಇದುವರೆಗೆ ಸರಿಯಾದ ಮಾಹಿತಿ ನೀಡಿಲ್ಲ‌ ಎಂಬ ಆರೋಪ ಒಂದೆಡೆಯಾದರೆ ಆಳಿಗೊಂದರಂತೆ ಕಲ್ಲು ಎಸೆಯುವ ಮಾಧ್ಯಮಗಳಿಂದಾಗಿ ಈ ಪ್ರಕರಣ ಪೋಲಿಸರ ಮೇಲೆ ಒತ್ತಡ ಹೆಚ್ಚಿಸಿದೆ. ಕಮೀಷನರ್ ಅನುಪಮ್ ಅಗರ್ವಾಲ್ ಅವರ ಪ್ರಕಾರ ಕೊಲೆಗೆ ಸಂಬಂಧಿಸಿದಂತೆ ನಾಲ್ವರ ಬಂಧನವಾಗಿದೆ. ಕೊಲೆಗೆ ಮೋಟಿವ್ ಇಲ್ಯಾಸ್ ಕೊಲೆಗೆ ಪ್ರತೀಕಾರ ಎಂಬುದೇ ಆಗಿದೆ. ಆದರೆ ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಸಮೀರ್ ಹಲವರ ವಿರೋಧ ಕಟ್ಟಿಕೊಂಡಿದ್ದ, ಈ ಬಗ್ಗೆ ಏನಾದರೂ ತನಿಖೆ ಮಾಡಲಾಗಿದೆಯಾ ಗೊತ್ತಿಲ್ಲ. ಅದನ್ನು ಪೋಲಿಸರೇ ಹೇಳಬೇಕಿದೆ.

ಸಾವಿಗೆ‌ ನ್ಯಾಯ ಕೇಳುವುದು ತಪ್ಪು, ಯಾಕೆಂದರೆ ಸತ್ತವ ಸ್ವಾತಂತ್ರ್ಯ ಹೋರಾಟಗಾರನಲ್ಲ. ಆದರೆ ಕಾನೂನಿನ ಕುಣಿಕೆಯಿಂದ ನೈಜ ಅಪರಾಧಿ ತಪ್ಪಿಸಿಕೊಂಡರೆ ಆತನಿಗೆ ಮತ್ತಷ್ಟು ಅಪರಾಧ ಕೃತ್ಯ ಎಸಗಲು ಮತ್ತೊಂದು ಅವಕಾಶ ಸಿಗುವುದು ಶಾಂತಿಪ್ರಿಯ ಮಂಗಳೂರಿನ ಪಾಲಿಗೆ ಒಳ್ಳೆಯ ಸೂಚನೆಯಲ್ಲ. ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗಿದ್ದರೆ ಪೋಲಿಸರ ಶ್ರಮಕ್ಕೆ ಹ್ಯಾಟ್ಸಾಫ್, ಆದರೆ ಎಲ್ಲಾದರೂ ಎಡವಿದ್ದರೆ ಸರಿಪಡಿಸುವ ಅವಕಾಶವೂ ಅವರಿಗಿದೆ. ಸದ್ಯ ಕೊಲೆಗೈದವರು ಜೈಲು ಪಾಲಾಗಿದ್ದರೆ, ಕೊಲೆಗೆ ಕುಮ್ಮಕ್ಕು ನೀಡಿದವರು ಯಾರಾದರೂ ಇದ್ದರೆ ಪೋಲಿಸರು ಕ್ರಮ ಕೈಗೊಳ್ಳುತ್ತಾರೋ ಕಾಲವೇ ಉತ್ತರಿಸಬೇಕಿದೆ.

Leave a Comment

Leave a Reply

Your email address will not be published. Required fields are marked *