NH75 : ಸಕಲೇಶಪುರ ಬಳಿಯ ದೊಡ್ಡತಪ್ಪಲು, ಹೆಗ್ಗದ್ದೆ ಬಳಿ ಗುಡ್ಡ ಕುಸಿತ – ಶಿರಾಡಿ ಘಾಟ್ ವಾಹನ ಸಂಚಾರ ಬಂದ್ : ಅಲ್ಲಲ್ಲಿ ಬದಲಿ ಸಂಚಾರಕ್ಕೆ ವ್ಯವಸ್ಥೆ
ನ್ಯೂಸ್ ಆ್ಯರೋ : ಅವೈಜ್ಞಾನಿಕ ರಸ್ತೆ ಕಾಮಗಾರಿಯ ಹಿನ್ನೆಲೆಯಲ್ಲಿ ಭೂಕುಸಿತ ಉಂಟಾಗಿದ್ದು ಮಂಗಳೂರು-ಬೆಂಗಳೂರು ರಸ್ತೆಯ ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್ ಆಗಿದೆ. ಗುಡ್ಡ ಕುಸಿತದಿಂದಾಗಿ ಹೆದ್ದಾರಿ 75 ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸುಮಾರು ಕಿ.ಮೀ ವರೆಗೂ ಟ್ರಾಫಿಕ್ ಜಾಮ್ ಆಗಿದೆ.
ಸಕಲೇಶಪುರದ ಹೈವೇ ಜಂಕ್ಷನ್ ಬಳಿ ವಾಹನಗಳು ಸಾಲಾಗಿ ನಿಂತಿದ್ದು, ಹಾಸನದವರೆಗೂ ವಾಹನ ದಟ್ಟಣೆ ಕಂಡುಬರುತ್ತಿದೆ. ಘನ ವಾಹನಗಳ ಮಧ್ಯೆ ಸಣ್ಣಪುಟ್ಟ ವಾಹನಗಳು ಜಾಮ್ ಆಗಿದ್ದು ಮುಂಜಾನೆಯಿಂದಲೇ NH75 ಸಂಚಾರ ತೀರಾ ಅಸ್ತವ್ಯಸ್ತಗೊಂಡಿದೆ.
ಸಕಲೇಶಪುರ ತಾಲೂಕಿನ ಹೆಗ್ಗದ್ದೆ ಬಳಿಯೂ ಅಲ್ಲಲ್ಲಿ ಭೂ ಕುಸಿತ ಆರಂಭವಾಗಿದ್ದು, ಅಪಾಯದ ಮಟ್ಟವನ್ನು ಅವಲೋಕಿಸಿದ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಲಘು ವಾಹನಗಳಿಗೆ ಬದಲಿ ಮಾರ್ಗ ತೋರಿಸಲಾಗಿದೆ. ಭಾರೀ ಮಳೆಯಿಂದ ಘನ ವಾಹನಗಳನ್ನು ಹೆದ್ದಾರಿಯಲ್ಲೇ ಸಂಚಾರಕ್ಕೆ ಅನುವು ಮಾಡಿದ್ದು ಲಘು ವಾಹನಗಳನ್ನು ಕಾಡ ಮನೆ ಎಸ್ಟೇಟ್ ಮೂಲಕ ಹಾದು ಹೋಗಬೇಕಾದ ಅನಿವಾರ್ಯತೆ ಮೂಡಿದೆ.
ಸಕಲೇಶಪುರ ಠಾಣೆ ವ್ಯಾಪ್ತಿಯ ಮಾರನಹಳ್ಳಿ ಪೋಲಿಸರು ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪರಿಸ್ಥಿತಿಗೆ ಅನುಗುಣವಾಗಿ ವಾಹನ ಸಂಚಾರವನ್ನು ನಿಭಾಯಿಸುತ್ತಿದ್ದಾರೆ. ಈ ಮಧ್ಯೆ ಹೆದ್ದಾರಿ ಪಾರ್ಶ್ವದ ಬೆಟ್ಟ ಗುಡ್ಡಗಳಲ್ಲಿ ಜರಿತ ಕಂಡು ಬಂದಿದ್ದು, ಅಪಾಯದ ಭೀತಿಯನ್ನು ಎದುರಿಸಿಕೊಂಡೇ ವಾಹನವನ್ನು ಚಲಾಯಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಚಲಿಸುತ್ತಿದ್ದ ಕಾರ್ ಮೇಲೆ ಗುಡ್ಡ ಕುಸಿತ
ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿತದಿಂದ ಹಲವರು ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡತಪ್ಪಲು ಬಳಿ ಚಲಿಸುತ್ತಿದ್ದ ಓಮ್ನಿ ಕಾರಿನ ಮೇಲೆ ಗುಡ್ಡ ಕುಸಿತ ಉಂಟಾಗಿದ್ದು, ಅದೃಷ್ಟಶಾತ್ ಕಾರಿನಲ್ಲಿದ್ದವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅದರೆ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಾರಿನಲ್ಲಿ ಸುಮಾರು ನಾಲ್ಕೈದು ಜನ ಪ್ರಯಾಣಿಸುತ್ತಿದ್ದು ಒಬ್ಬರಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿವೆ.
Leave a Comment