ಇಂದಿನಿಂದ ಸಂಸತ್ತಿನ ಬಜೆಟ್ ಅಧಿವೇಶನ; ಆರ್ಥಿಕ ಸಮೀಕ್ಷೆ ಮಂಡನೆ
ನ್ಯೂಸ್ ಆ್ಯರೋ: ಪಿಎಂ ಮೋದಿ 3.0 ಸರ್ಕಾರದ ಎರಡನೇ ಪೂರ್ಣಾವಧಿ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಬೆಳಿಗ್ಗೆ 11 ಗಂಟೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಜಂಟಿ ಸದನ ಉದ್ದೇಶಿಸಿ ಮಾತನಾಡಲಿದ್ದಾರೆ. ಫೆ.1 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನದ ಮೊದಲ ದಿನವಾದ ಶುಕ್ರವಾರ ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ಭಾಷಣದ ಬಳಿಕ ಆರ್ಥಿಕ ಸಮೀಕ್ಷಾ ವರದಿ ಮಂಡನೆಯಾಗಲಿದೆ. ಜ.31ರಿಂದ ಏಪ್ರಿಲ್ 4 ರವರೆಗೆ ಎರಡು ಹಂತಗಳಲ್ಲಿ ಬಜೆಟ್ ಅಧಿವೇಶನ ನಡೆಯಲಿದ್ದು, ಮೊದಲ ಹಂತದ ಬಜೆಟ್ ಫೆ.13ಕ್ಕೆ ಮುಕ್ತಾಯವಾಗಲಿದೆ. ಎರಡನೇ ಹಂತದ ಬಜೆಟ್ ಅಧಿವೇಶನ ಮಾರ್ಚ್ 10ರಿಂದ ಆರಂಭವಾಗಿ ಏಪ್ರಿಲ್ 4ಕ್ಕೆ ಮುಕ್ತಾಯವಾಗಲಿದೆ.
ಕೇಂದ್ರ ಸರ್ಕಾರವು ಬಜೆಟ್ ಅಧಿವೇಶನದಲ್ಲಿ ವಕ್ಫ್ ತಿದ್ದುಪಡಿ ಸೇರಿದಂತೆ ಇತರ ಮೂರು ಹೊಸ ಕಾನೂನುಗಳನ್ನು ತರಲು ಮುಂದಾಗಿದೆ. ವಿಮಾನ ವಸ್ತುಗಳ ಮೇಲಿನ ಹಿತಾಸಕ್ತಿಗಳ ರಕ್ಷಣೆ ಮಸೂದೆ, ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ ಮಸೂದೆ, ವಲಸೆ ಮತ್ತು ವಿದೇಶಿಯ ಮಸೂದೆ ಜಾರಿಗೆ ಮುಂದಾಗಿದೆ. ಜೊತೆಗೆ ಹಿಂದಿನ ಅಧಿವೇಶನದಿಂದ ಉಭಯ ಸದನಗಳಲ್ಲಿ ಇನ್ನು 10 ಮಸೂದೆಗಳು ಬಾಕಿ ಉಳಿದಿದ್ದು ಅವುಗಳನ್ನೂ ಅಂಗೀಕರಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಗುರುವಾರ ಸರ್ವಪಕ್ಷಗಳ ಸಭೆ ನಡೆಯಿತು. ಸಚಿವ ರಾಜ್ನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 36 ಪಕ್ಷಗಳ 52 ನಾಯಕರು ಭಾಗಿಯಾಗಿದ್ದರು.
ಬಜೆಟ್ ಅಧಿವೇಶನವು ಫಲಪ್ರದವಾಗಿರುವಂತೆ ನೋಡಿಕೊಳ್ಳುವಂತೆ ಸಂಸದೀಯ ಖಾತೆ ಸಚಿವ ಕಿರಣ್ ರಿಜಿಜು ಎಲ್ಲಾ ಪಕ್ಷಗಳ ನಾಯಕರಿಗೂ ಮನವಿ ಮಾಡಿದರು. ಈ ವೇಳೆ ಕುಂಭಮೇಳ ಕಾಲ್ತುಳಿತ, ಹಣದುಬ್ಬರ, ಮೊದಲಾದ ವಿಷಯಗಳ ಚರ್ಚೆಗೆ ಅವಕಾಶ ನೀಡುವಂತೆ ವಿಪಕ್ಷಗಳ ಸದಸ್ಯರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರ, ಕಲಾಪದ ಕಾರ್ಯಸೂಚಿಯನ್ನು ಕಲಾಪ ಸಮಿತಿ ನಿರ್ಧರಿಸಲಿದೆ ಎಂದು ಸ್ಪಷ್ಟಪಡಿಸಿತು.
ಇನ್ನು ವಕ್ಫ್ (ತಿದ್ದುಪಡಿ) ಮಸೂದೆಗೆ ಅಗತ್ಯ ತಿದ್ದುಪಡಿಗಳನ್ನು ತಂದಿದ್ದ ಸಂಸತ್ತಿನ ಜಂಟಿ ಸಂಸದೀಯ ಸಮಿತಿಯು ತನ್ನ ವರದಿಯನ್ನು ಗುರುವಾರ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಹಸ್ತಾಂತರಿಸಿದೆ. ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ಓಂ ಬಿರ್ಲಾ ಅವರನ್ನು ಸಂಸತ್ ಭವನದ ಸ್ಪೀಕರ್ ಕಚೇರಿಯಲ್ಲಿ ಭೇಟಿಯಾಗಿ, ಪ್ರಸ್ತಾವಿತ ಕಾನೂನಿನ ತಿದ್ದುಪಡಿ ಮಸೂದೆಯ ಕರಡನ್ನು ಹಸ್ತಾಂತರಿಸಿದರು. ಸರ್ಕಾರ, ಪ್ರಸಕ್ತ ಬಜೆಟ್ ಅಧಿವೇಶನದಲ್ಲೇ ಮಸೂದೆ ಮಂಡನೆಯ ಉದ್ದೇಶ ಹೊಂದಿದೆ.
Leave a Comment