ಫೋನ್ ಮೂಲಕ ಎರಡನೇ ಪತ್ನಿಗೆ ತ್ರಿವಳಿ ತಲಾಖ್; ಪತಿಯನ್ನು ಬಂಧಿಸಿದ ಪೊಲೀಸರು
ನ್ಯೂಸ್ ಆ್ಯರೋ: ದೂರವಾಣಿ ಮೂಲಕವೇ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಕ್ಕಾಗಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಕೊಲ್ಲಂ ಜಿಲ್ಲೆಯ ಮೈನಾಗಪಲ್ಲಿ ಮೂಲದ ಅಬ್ದುಲ್ ಬಸಿತ್ ಎಂಬಾತನನ್ನು ಎರಡು ದಿನಗಳ ಹಿಂದೆ ಬಂಧಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಸಿತ್ ವಿರುದ್ಧ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆಯ ಸಂಬಂಧಿತ ವಿಭಾಗಗಳು ಮತ್ತು ಭಾರತೀಯ ನ್ಯಾಯ ಸಂಹಿತೆಯ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿಯನ್ನು ಚವಾರ ಉಪ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.
ಕೊಲ್ಲಂ ಜಿಲ್ಲೆಯ ಚವಾರ ನಿವಾಸಿಯಾದ ಆತನ 20 ವರ್ಷದ ಪತ್ನಿ ನೀಡಿದ ದೂರಿನ ಮೇರೆಗೆ ಆತನನ್ನು ಬಂಧಿಸಲಾಗಿದೆ.
ದೂರಿನ ಪ್ರಕಾರ, ಬಸಿತ್ ತನ್ನ ಮೊದಲ ಮದುವೆಯನ್ನು ಬಹಿರಂಗಪಡಿಸದೆ ಎರಡನೇ ಮದುವೆಯಾಗಿದ್ದಾನೆ. ಮೊದಲ ಪತ್ನಿ ತನ್ನ ಕುಟುಂಬದ ಮನೆಯಲ್ಲಿಯೇ ಇದ್ದುದರಿಂದ ಎರಡನೇ ಪತ್ನಿಯನ್ನು ಮದುವೆಯಾದ ನಂತರ ಬಾಡಿಗೆ ಮನೆಗೆ ಕರೆದೊಯ್ದಿದ್ದಾನೆ.
ಆತನ ಮೊದಲ ಮದುವೆಯ ಬಗ್ಗೆ ತಿಳಿದಾಗ ಅದನ್ನು ಪ್ರಶ್ನಿಸಿದ್ದಕ್ಕೆ ಕೋಪಗೊಂಡ ಆತ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾನೆ. ಅಲ್ಲದೆ, ಬೇರೊಬ್ಬ ಮಹಿಳೆಯನ್ನು ಮದುವೆಯಾಗುವುದಾಗಿ ಬಸಿತ್ ಬೆದರಿಕೆ ಹಾಕಿದ್ದಾನೆ. ಜಗಳದ ನಂತರ ಮಹಿಳೆ ತನ್ನ ಪೋಷಕರ ಮನೆಗೆ ಮರಳಿದ್ದಾರೆ. ಜನವರಿ 19 ರಂದು ಬಸಿತ್ ಆಕೆಗೆ ಕರೆ ಮಾಡಿ ತ್ರಿವಳಿ ತಲಾಖ್ ನೀಡಿದ್ದು, ತಮ್ಮ ಸಂಬಂಧ ಮುಗಿದಿದೆ ಎಂದು ಘೋಷಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Leave a Comment