ಅವಾಚ್ಯ ಶಬ್ದ ಬಳಕೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಸಿಐಡಿ ತನಿಖೆಯಲ್ಲಿ ಮಹತ್ವದ ವಿಚಾರ ಬೆಳಕಿಗೆ
ನ್ಯೂಸ್ ಆ್ಯರೋ: ಬೆಳಗಾವಿ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಪರಿಷತ್ ಸದಸ್ಯ ಸಿಟಿ ರವಿ ಅವಾಚ್ಯ ಶಬ್ದ ಬಳಸಿರೋದು ಸಿಐಡಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಡಿಐಪಿಆರ್ ನೀಡಿದ ಸದನದ ವಿಡಿಯೋ ರೆಕಾರ್ಡ್ಸ್ ಅನ್ನು ತನಿಖಾಧಿಕಾರಿಗಳು ಫೊರೆನ್ಸಿಕ್ ಪರೀಕ್ಷೆಗೆ ಒಳಪಡಿಸಿದ್ದರು. ಆ ಪರೀಕ್ಷೆಯಲ್ಲಿ ಅವಾಚ್ಯ ಶಬ್ದ ಬಳಕೆ ಮಾಡಿರೋದು ಪತ್ತೆಯಾಗಿದೆ ಎನ್ನಲಾಗಿದೆ. 4 ಗಂಟೆಯ ವಿಡಿಯೋ ರೆಕಾರ್ಡ್ನಲ್ಲಿ 7 ಬಾರಿ ಅವಾಚ್ಯ ಶಬ್ದ ಬಳಕೆ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಹೀಗಾಗಿ ಅವಾಚ್ಯ ಶಬ್ದ ಬಳಸಿದ ಧ್ವನಿ ಪತ್ತೆಗೆ ಸಿಟಿ ರವಿಯ ವಾಯ್ಸ್ ಸ್ಯಾಂಪಲ್ ಪಡೆಯಲು ಸಿಐಡಿ ಮುಂದಾಗಿದೆ. ಆದರೆ ಸಿಟಿ ರವಿ, ತಾವು ಅವಾಚ್ಯ ಶಬ್ದ ಬಳಸಿಲ್ಲ ಎಂದಿದ್ದಾರೆ. ಜೊತೆಗೆ ವಾಯ್ಸ್ ಸ್ಯಾಂಪಲ್ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಕೋರ್ಟ್ ಮೂಲಕ ವಿಚಾರಣೆಗೆ ಮತ್ತು ವಾಯ್ಸ್ ಸ್ಯಾಂಪಲ್ ಪಡೆಯಲು ಸಿಐಡಿ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಅಷ್ಟೇ ಅಲ್ಲ, ವಿವಿಧ ಆಯಾಮಗಳಲ್ಲಿ ಸಿಐಡಿ ಅಧಿಕಾರಿಗಳು ತನಿಖೆ ನಡೆಸ್ತಿದ್ದಾರೆ. ಮುಂದುವರಿದ ಭಾಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಪುತ್ರ ಡಾ.ಯಾತೀಂದ್ರಗೆ ಸಿಐಡಿ ಡಿವೈಎಸ್ಪಿ ಕೇಶವಮೂರ್ತಿ ನೋಟಿಸ್ ನೀಡಿದ್ದಾರೆ. ಎಂಎಲ್ಸಿಗಳಾದ ಡಾ.ಯತೀಂದ್ರ ಸಿದ್ದರಾಮಯ್ಯ, ಟಿಟಿ ಶ್ರೀನಿವಾಸ್ಗೆ ನೋಟಿಸ್ ಕೊಡಲಾಗಿದೆ. ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರೋ ಟಿಟಿ ಶ್ರೀನಿವಾಸ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅಂದು ಸದನದಲ್ಲಿ ಅಕ್ಕಪಕ್ಕ ಕೂತಿದ್ದರು. ಅಲ್ಲದೇ ಡಾ.ಯತೀಂದ್ರ ಕೂಡ ಘಟನೆಗೆ ಸಾಕ್ಷಿಯಾಗಿದ್ದರು. ನೋಟಿಸ್ ನೀಡಿರುವ ಅಧಿಕಾರಿಗಳು, ಇವರುಗಳಿಂದ ಹೇಳಿಕೆ ಪಡೆಯಲಿದ್ದಾರೆ.
Leave a Comment