ಕರ್ನಾಟಕದ ಇತಿಹಾಸದಲ್ಲೇ ನಾಳೆ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ; ನಾಳೆ ಚಿಕ್ಕಮಗಳೂರಲ್ಲಿ ಮೋಸ್ಟ್ ವಾಂಟೆಡ್ 6 ನಕ್ಸಲ್ ಶರಣಾಗತಿ ?
ನ್ಯೂಸ್ ಆ್ಯರೋ: ನಾಳೆ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ 6 ನಕ್ಸಲರು ನಾಳೆ ಶರಣಾಗುವ ಸಾಧ್ಯತೆ ಇದ್ದು, ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದೆ. ನಾಳೆ 6 ನಕ್ಸಲರು ಶರಣಾಗತಿ ಆದ್ರೆ ಕರ್ನಾಟಕ ನಕ್ಸಲ್ ಮುಕ್ತ ಆಗುತ್ತೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ನಾಳೆ 6 ಮಂದಿ ನಕ್ಸಲರು ಶರಣಾಗೋದು ಬಹುತೇಕ ಫಿಕ್ಸ್ ಆಗಿದೆ. ಈಗಾಗಲೇ ಶಾಂತಿಗಾಗಿ ನಾಗರೀಕ ವೇದಿಕೆ ಹಾಗೂ ಶರಣಾಗತಿ ಕಮಿಟಿ ಸದಸ್ಯರು ಕಾಡಿಗೆ ತೆರಳಿ ಮನವೋಲಿಸಿದ್ದಾರೆ. ಶಿವಮೊಗ್ಗದ ಶ್ರೀಪಾಲ್ ಸೇರಿ ಹಲವರು ನಕ್ಸಲರನ್ನ ಕಾಡಿನಲ್ಲಿ ಮನವೊಲಿಸಿ ಮುಖ್ಯವಾಹಿನಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಆ್ಯಕ್ಟಿವ್ ಆಗಿದ್ದ ನಕ್ಸಲರನ್ನ ಶಾಂತಿಗಾಗಿ ನಾಗರೀಕ ವೇದಿಕೆ ಹಾಗೂ ಶರಣಾಗತಿ ಕಮಿಟಿ ಕಾಡಿನೊಳಗೆ ಭೇಟಿಯಾಗಿ ಸಭೆ ನಡೆಸಿದ್ದಾರೆ.
ಶರಣಾಗುವ ನಕ್ಸಲರು
- ಮುಂಡುಗಾರು ಲತಾ (ಮುಂಡಗಾರು ಶೃಂಗೇರಿ)
- ವನಜಾಕ್ಷಿ (ಬಾಳೆಹೊಳೆ ಕಳಸ)
- ಸುಂದರಿ (ಕುಂತಲೂರು ದಕ್ಷಿಣ ಕನ್ನಡ)
- ಮಾರಪ್ಪ ಅರೋಳಿ (ಕರ್ನಾಟಕ)
- ವಸಂತ ಟಿ (ತಮಿಳುನಾಡು)
- ಎನ್. ಜೀಶಾ (ಕೇರಳ)
6 ಮಂದಿ ನಕ್ಸಲರು ಈಗಾಗಲೇ ಶಾಂತಿಗಾಗಿ ನಾಗರಿಕ ವೇದಿಕೆಗೆ ಶರಣಾಗತಿ ಪತ್ರ ನೀಡಿದ್ದಾರೆ. ನಾಳೆ ಬೆಳಗ್ಗೆ 8ರಿಂದ 9ಕ್ಕೆ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಲಿದ್ದಾರೆ ಎನ್ನಲಾಗಿದೆ. ರಾಷ್ಟ್ರೀಯ ಗುಪ್ತಚರ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಮಹತ್ವದ ಮಾಹಿತಿ ಕಲೆ ಹಾಕಿ ಚಿಕ್ಕಮಗಳೂರಿಗೆ ಆಗಮಿಸಿದ್ದಾರೆ.
ಶರಣಾಗುವ ಮುನ್ನ ನಕ್ಸಲರು ಸರ್ಕಾರಕ್ಕೆ ಅಂದರೆ ಶಾಂತಿ ನಾಗರಿಕರ ವೇದಿಕೆ ಮತ್ತು ನಕ್ಸಲ್ ಪುನರ್ವಸತಿ ಸಮಿತಿಗೆ ಬರೆದಿರುವ ಪತ್ರ ಲಭ್ಯವಾಗಿದೆ.
ನಕ್ಸಲ್ರು ಬರೆದ ಪತ್ರದಲ್ಲಿ ಏನಿದೆ?:
“ಆರು ಜನರಾದ ನಾವು ಸಂಪೂರ್ಣ ಸಮ್ಮತಿ ಮತ್ತು ಏಕ ಅಭಿಪ್ರಾಯದ ಮೇರೆಗೆ ಈ ಪತ್ರವನ್ನು ತಮಗೂ ಆ ಮೂಲಕ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಸರ್ಕಾರಿಗಳಗೆ ಬರೆಯುತ್ತಿದ್ದೇವೆ. ದೇಶದ ಇಂದಿನ ಸಂದರ್ಭ, ಚಳುವಳಿಗಳು ಪಡೆಯುತ್ತಿರುವ ರೂಪಾಂತರ, ಸಾಮಾಜಿಕ ಅಗತ್ಯ ಎಲವನ್ನು ಗಮನದಲ್ಲಿ ಇಟ್ಟುಕೊಂಡು ಸಶಸ್ತ್ರ ಹೋರಾಟದ ಮಾರ್ಗವನ್ನು ಬದಲಾಯಿಸಿ ಪ್ರಜಾತಾಂತ್ರಿಕ ಮುಖ್ಯವಾಹಿನಿಗೆ ಮರಳುವುದು ಒಳ್ಳೆಯದು ಮತ್ತು ಅದಕ್ಕೆ ಸಾಧ್ಯತೆ ಇದೆ ಎಂದು ಮನವರಿಕೆಯಾಗಿದೆ. ನಾವು ಯಾವುದೇ ಒತ್ತಡವಿಲ್ಲದೆ. ಸ್ವ-ಇಚ್ಛೆಯಿಂದ ಮುಖ್ಯವಾಹಿನಿಗೆ ಬರಲು ಬಯಸುತ್ತಿದ್ದೇವೆ. ಆದರೆ ಈ ಸಂದರ್ಭದಲ್ಲಿ ಕೆಲವು ಖಚಿತ ಸ್ಪಷ್ಠೀಕರಣವನ್ನು ಸರ್ಕಾರ ಮತ್ತು ಸಂಬಂಧಿತ ಸಮಿತಿಯಿಂದ ಬಯಸುತ್ತಿದ್ದೇವೆ” ಎಂದು ಪತ್ರದಲ್ಲಿ ಬರೆದಿದ್ದಾರೆ.
Leave a Comment