ಕೆಎಸ್ಆರ್ಟಿಸಿ ಸಿಬ್ಬಂದಿಗೆ ಗುಡ್ ನ್ಯೂಸ್; ನಗದು ರಹಿತ ವೈದ್ಯಕೀಯ ಚಿಕಿತ್ಸೆ ಯೋಜನೆಗೆ ಸಿಎಂ ಚಾಲನೆ
ನ್ಯೂಸ್ ಆ್ಯರೋ: ಕೆಎಸ್ಆರ್ಟಿಸಿ ನೌಕರರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ನೀಡುವ ಆರೋಗ್ಯ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ಮೂಲಕ ಸಾರಿಗೆ ನೌಕರರ ಹಲವು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ.
ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ, ಈ ಯೋಜನೆಯಡಿ ಒಡಬಂಡಿಕೆ ಮಾಡಿಕೊಂಡಿರುವ ಎಲ್ಲ ಆಸ್ಪತ್ರೆಗಳು ಕೆಎಸ್ಆರ್ಟಿಸಿ ನೌಕರರು ಮತ್ತು ಕುಟುಂಬದವರು ಆಸ್ಪತ್ರೆಗೆ ಬಂದಾಗ ಅವರನ್ನು ಗೌರವಯುತವಾಗಿ ಹಾಗೂ ಮಾನವೀಯತೆಯಿಂದ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು.
“ಕೆಎಸ್ಆರ್ಟಿಸಿ ಆರೋಗ್ಯ” ಯೋಜನೆಯಡಿ ಸಾರಿಗೆ ಸಂಸ್ಥೆಯ ಎಲ್ಲ ನೌಕರರು, ಅವರ ತಂದೆ – ತಾಯಿ ಮತ್ತು ಪತ್ನಿ – ಮಕ್ಕಳಿಗೆ ಖರ್ಚಿನ ಮಿತಿಯಿಲ್ಲದ ವೈದ್ಯಕೀಯ ಚಿಕಿತ್ಸೆ ಸೌಲಭ್ಯ ಸಿಗಲಿದೆ. ಈ ಯೋಜನೆ ಅನುಷ್ಠಾನಕ್ಕಾಗಿ ರಾಜ್ಯಾದ್ಯಂತ ಇರುವ ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 250 ಖಾಸಗಿ ಆಸ್ಪತ್ರೆಗಳೊಂದಿಗೆ ಒಡಬಂಡಿಕೆ ಮಾಡಿಕೊಳ್ಳಲಾಗಿದೆ. ಇದೇ ವೇಳೆ, ಕೆಎಸ್ಆರ್ಟಿಸಿ ನೌಕರರು ಅಪಘಾತದಲ್ಲಿ ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ನೀಡಲಾಗುವ 1 ಕೋಟಿ ರೂ ಹಾಗೂ ಸೇವೆಯಲ್ಲಿರುವ ಮೃತಪಟ್ಟ ನೌಕರರ ಕುಟುಂಬಕ್ಕೆ ನೀಡಲಾಗುವ 10 ಲಕ್ಷ ರೂ ಪರಿಹಾರದ ಚೆಕ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಿಸಿದರು.
ದೇಶದಲ್ಲಿ ಮೊದಲ ಬಾರಿಗೆ ಸಾರಿಗೆ ನಿಗಮದಲ್ಲಿ ಆರೋಗ್ಯ ಸೇವೆ ಸೌಲಭ್ಯ ನೀಡುತ್ತಿದೆ. ರಾಜ್ಯದ 250 ಆಸ್ಪತ್ರೆಯಲ್ಲಿ ಸಾರಿಗೆ ನೌಕರರು ಆರೋಗ್ಯ ಕಾರ್ಡ್ ಬಳಸಿ ನಗದು ರಹಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು. ಸೂಪರ್ ಸ್ಪೆಷಾಲಿಟಿ, ಮಲ್ಟಿ ಸ್ಪೆಷಾಲಿಟಿ ಸೇರಿದಂತೆ ಸಾಮಾನ್ಯ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ಪಡೆಯಬಹುದಾಗಿದೆ. ಆ ಮೂಲಕ ಡ್ರೈವರ್, ಕಂಡಕ್ಟರ್ ಸೇರಿದಂತೆ ಸಿಬ್ಬಂದಿಗೆ ನಗದು ರಹಿತ ಚಿಕಿತ್ಸೆ ದೊರೆಯಲಿದೆ. ಯಾವುದೇ ಕಾಯಿಲೆಗೆ, ಸಂಪೂರ್ಣ ಚಿಕಿತ್ಸೆ ವೆಚ್ಚ ನೀಡಲಾಗುವುದು. ಸಾರಿಗೆ ನೌಕರರ ಮನೆಯ ಆರು ಜನರು ಈ ಕಾರ್ಡ್ ಬಳಸಿ ಚಿಕಿತ್ಸೆ ಪಡೆದುಕೊಳ್ಳಬಹುದು. ಕೆಎಸ್ಆರ್ಟಿಸಿ ನೌಕರರು ನಿವೃತ್ತಿಯಾಗುವವರೆಗೂ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ಇದೇ ವೇಳೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಸುಮಾರು 20 ವರ್ಷ ಗಳಿಂದ ಈ ವಿಚಾರವಾಗಿ ಬೇಡಿಕೆ ಇತ್ತು. 250 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಇನ್ನೂ 50 ಆಸ್ಪತ್ರೆಗಳನ್ನು ಸೇರ್ಪಡೆ ಮಾಡಲಾಗುತ್ತದೆ. ಮುಂದೆ ಸರ್ಕಾರದ ಆಸ್ಪತ್ರೆಗಳನ್ನು ಸಹ ಸೇರಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ಅನೇಕ ನೌಕರರ ಕನಸು ನನಸಾದ ದಿನ ಇಂದು ಎಂದು ತಿಳಿಸಿದ್ದಾರೆ.
ಕೆಎಸ್ಆರ್ ಟಿಸಿ ಎಂಡಿ ಅನ್ಬು ಕುಮಾರ್ ಮಾತನಾಡಿ, ಕೆಎಸ್ಆರ್ಟಿಸಿ ಆರೋಗ್ಯ ಕಾರ್ಡ್ಗಾಗಿ ನೌಕರರು ಪ್ರತಿ ತಿಂಗಳು 650 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಕೆಎಸ್ಆರ್ಟಿಸಿ ನಿಗಮ 600 ರೂಪಾಯಿ ಪಾವತಿ ಮಾಡುತ್ತದೆ. ಇದರಿಂದ ವರ್ಷಕ್ಕೆ ಒಟ್ಟು 46 ಕೋಟಿ ರೂಪಾಯಿ ಸಂಗ್ರಹವಾಗುತ್ತದೆ. ಈ ಹಿಂದೆ ಕೆಎಸ್ಆರ್ಟಿಸಿ ನೌಕರರ ಆರೋಗ್ಯಕ್ಕಾಗಿ ಪ್ರತಿ ವರ್ಷ 16 ಕೋಟಿ ರೂಪಾಯಿ ವೆಚ್ಚ ಮಾಡುತ್ತಿತ್ತು. ರಾಜ್ಯದ ಆಯುರ್ವೇದಿಕ್ ಆಸ್ಪತ್ರೆ ಸೇರಿದಂತೆ 250 ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಕೆಎಸ್ಆರ್ಟಿಸಿ ನೌಕರರು ನಗದು ರಹಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು. ನೌಕರರು ಚಿಕಿತ್ಸೆ ಪಡೆದುಕೊಳ್ಳಲು ಯಾವುದೇ ಮಿತಿ ಇರೋದಿಲ್ಲ ಎಂದು ತಿಳಿಸಿದರು.
Leave a Comment