ಬುಲೆಟ್ ರೈಲಿಗೆ ಉಕ್ಕಿನ ಸೇತುವೆ; ಮೇಡ್ ಇನ್ ಇಂಡಿಯಾ ಚಮತ್ಕಾರ ಹೇಗಿದೆ ನೋಡಿ
ನ್ಯೂಸ್ ಆ್ಯರೋ: ಮುಂಬೈ ಅಹ್ಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಯ ಭಾಗವಾಗಿ ವಡೋದರಾದಲ್ಲಿ 60 ಮೀಟರ್ ಉದ್ದದ ಉಕ್ಕಿನ ಸೇತುವೆಯನ್ನು ನಿರ್ಮಿಸಲಾಗಿದೆ. ಬಾಜ್ವಾ ಮತ್ತು ಛಾಯಾಪುರಿ ಮಾರ್ಗದಲ್ಲಿ ಈ ಸ್ಟೀಲ್ ಬ್ರಿಡ್ನ್ ಅನ್ನು ಅಳವಡಿಸಲಾಗಿದೆ. ಮುಂಬೈ ಅಹ್ಮದಾಬಾದ್ ಕಾರಿಡಾರ್ನಲ್ಲಿ ಇಂಥ ಒಟ್ಟು 28 ಸ್ಟೀಲ್ ಸೇತುವೆಗಳನ್ನು ಯೋಜಿಸಲಾಗಿದ್ದು, ಕಳೆದ ದಿನ ನಿರ್ಮಿಸಲಾಗಿರುವುದು ಐದನೆಯದ್ದಾಗಿದೆ.
60 ಮೀಟರ್ ಉದ್ದದ ಈ ಸೇತುವೆ 12.5 ಮೀಟರ್ ಎತ್ತರ ಹಾಗೂ 14.7 ಮೀಟರ್ ಅಗಲ ಇದ್ದು, 645 ಮೆಟ್ರಿಕ್ ಟನ್ಗಳ ತೂಕ ಇದೆ. ಇದನ್ನು ಕಚ್ಛ್ ಜಿಲ್ಲೆಯ ಬಚಾವು ನಗರದಲ್ಲಿ ತಯಾರಿಸಿ, ಆ ಬಳಿಕ ವಡೋದರಾಗೆ ಸಾಗಿಸಿ ಅಲ್ಲಿ ಸ್ಥಾಪಿಸಲಾಗಿದೆ. ಜಪಾನೀ ತಂತ್ರಜ್ಞರ ಸಹಾಯ ಪಡೆದು ಈ ಯೋಜನೆ ಮಾಡಲಾಗಿದೆ. ಈ ರೀತಿಯ ರೆಡಿಮೇಡ್ ಸ್ಟೀಲ್ ಬ್ರಿಡ್ಜ್ ಅನ್ನು ಭಾರತದಲ್ಲೇ ತಯಾರಿಸಿರುವುದು ಇದೇ ಮೊದಲು.
ಕೆಲ ತಿಂಗಳ ಹಿಂದೆ ಇದೇ ವಡೋದರಾದಲ್ಲಿ 130 ಮೀಟರ್ ಉದ್ದದ ಸ್ಟೀಲ್ ಬ್ರಿಡ್ಜ್ ಅನ್ನು ಕೇವಲ 24 ಗಂಟೆ ಅವಧಿಯಲ್ಲಿ ಅಸೆಂಬಲ್ ಮಾಡಲಾಗಿತ್ತು. ಮಹಾರಾಷ್ಟ್ರದ ವಾರ್ಧಾದಲ್ಲಿ ಆ ಉಕ್ಕಿನ ಸೇತುವೆಯನ್ನು ತಯಾರಿಸಿ ಆ ಬಳಿಕ ವಡೋದರಾದ ನಿಗದಿತ ಸ್ಥಳಕ್ಕೆ ಸಾಗಿಸಿ ಅಲ್ಲಿ ಸ್ಥಾಪಿಸಲಾಗಿತ್ತು. ಸೂರತ್ನಲ್ಲಿ ರಾ.ಹೆ. 53ರಲ್ಲಿ ಈ ರೀತಿಯ ಮೊದಲ ಉಕ್ಕಿನ ಸೇತುವೆ ನಿರ್ಮಿಸಲಾಗಿದೆ. ವಡೋದರಾ-ಅಹ್ಮದಾಬಾದ್ ರೈಲ್ವೆ ಲೈನ್ನಲ್ಲಿ ಎರಡನೇ ಸ್ಟೀಲ್ ಬ್ರಿಡ್ಜ್ ನಿರ್ಮಿಸಲಾಗಿತ್ತು.
ಅಹ್ಮದಾಬಾದ್ ಮತ್ತು ಮುಂಬೈ ನಡುವಿನ ಈ ಹೈಸ್ಪೀಡ್ ರೈಲ್ ಮಾರ್ಗದಲ್ಲಿ ಬುಲೆಟ್ ಟ್ರೈನ್ವೊಂದು ಗಂಟೆಗೆ 320 ಕಿಮೀ ವೇಗದಲ್ಲಿ ಹೋಗಬಹುದು. ಮುಂಬೈನಿಂದ ಅಹ್ಮದಾಬಾದ್ ತಲುಪಲು ಕೇವಲ 2ರಿಂದ 2.5 ಗಂಟೆ ಸಾಕಾಗಬಹುದು. 2027ಕ್ಕೆ ಇಲ್ಲಿ ಮೊದಲ ಬುಲೆಟ್ ರೈಲು ಬರುವ ನಿರೀಕ್ಷೆ ಇದೆ. ಭಾರತದಲ್ಲಿ ನಡೆಯುತ್ತಿರುವ ಈ ಪ್ರಯೋಗದ ಅನುಭವವು ಮುಂದಿನ ದಿನಗಳಲ್ಲಿ ಬುಲೆಟ್ ರೈಲು ಯೋಜನೆಗಳನ್ನು ಸರಾಗವಾಗಿ ನಡೆಸಲು ಅನುಕೂಲ ಮಾಡಿಕೊಡುವ ನಿರೀಕ್ಷೆ ಇದೆ.
Leave a Comment